ಪೆಪ್ಪರ್‌ ಬೆಲೆ ಅಪ್ಪರ್‌ ರೇಂಜಿಗೆ – ದಿಢೀರ್ ಏರಿದ ಬೆಲೆ

ಮಂಗಳೂರು(ಕಾಸರಗೋಡು): ಕಾಳುಮೆಣಸು ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಎರಡು ದಿನಗಳ ಅಂತರದಲ್ಲಿ ಲಾಂಗ್ ಜಂಪ್ ಹೊಡೆದಿರುವ ಪೆಪ್ಪರ್ ಕೆಜಿಗೆ 18 ರೂಪಾಯಿ ಹೆಚ್ಚಾಗಿದೆ. ಗಾರ್ಬಲ್ಡ್ ಕಾಳುಮೆಣಸು ಪ್ರತಿ ಕೆಜಿಗೆ 540 ರೂ.ಹಾಗೂ ಅನ್ ಗಾರ್ಬಲ್ಡ್ ಗೆ 520ರೂ.ಗೆ ಏರಿಕೆಯಾಗಿದೆ.

ಕಳೆದ ಕೆಲವು ವಾರಗಳಿಂದ ಯಥಾ ಸ್ಥಿತಿಯಲ್ಲಿದ್ದ ಪೆಪ್ಪರ್ ಬೆಲೆಯಲ್ಲಿ ದಿಢೀರ್ ಏರಿಕೆ ಕಾಣಿಸಿದೆ. ಹವಾಮಾನ ಬದಲಾವಣೆ ಕಾರಣ ಮುಂದಿನ ವರ್ಷ ಕೇರಳ ಮತ್ತು ಕರ್ನಾಟಕದಲ್ಲಿ ಕಾಳುಮೆಣಸು ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂಬ ಅನುಮಾನ ಸಾರ್ವತ್ರಿಕವಾಗಿ ಕಾಣಿಸಿಕೊಂಡ ಹಿನ್ನೆಲೆ ದಿಢೀರ್ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಉತ್ತರ ಭಾರತದ ಕಾಳು ಮೆಣಸು ಖರೀದಿದಾರರು ಕೊಚ್ಚಿಯಲ್ಲಿ ನಡೆಸಿದ ಲಾಬಿ ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.

ಮುಂಗಾರು ಆರಂಭಿಕ ಹಂತದಲ್ಲಿ ಮಳೆಯ ಕೊರತೆ ಹಾಗೂ ಬಳಿಕ ಬಂದ ಭಾರಿ ಮಳೆ ಬೆಳೆ ಹಾನಿಗೆ ಕಾರಣವಾಗಿದೆ. ಈ ವರ್ಷ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುವುದಾಗಿ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ದೊಡ್ಡ ಮಸಾಲೆ ಕಂಪನಿಗಳು ಕಾಳು ಮೆಣಸಿನ ಸಂಗ್ರಹ ಆರಂಭಿಸಿವೆ. ಬೇಡಿಕೆ ಹೆಚ್ಚಾದಂತೆ ಬೆಲೆ ಏರಿದೆ.

ಕಳೆದ ಒಂದು ವಾರದಲ್ಲಿ ಪ್ರತಿ ಕೆಜಿ ಗೆ 20ರೂ ಹೆಚ್ಚಿದೆ. ದೆಹಲಿ, ಜೈಪುರ ಮತ್ತು ಇಂದೋರ್ ಮಾರುಕಟ್ಟೆಗಳನ್ನು ಕೇಂದ್ರೀಕರಿಸಿ ಉತ್ತರ ಭಾರತದ ವ್ಯಾಪಾರಿಗಳು ಕಾಳುಮೆಣಸು ಖರೀದಿಗೆ ಗುಂಪಾಗಿ ಬರಲಾರಂಭಿಸಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here