ಮಂಗಳೂರು(ನವದೆಹಲಿ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅಂಗೀಕರಿಸಿದ್ದಾರೆ.
ನಿಯಮಗಳ ಅಡಿಯಲ್ಲಿ ಅವಿಶ್ವಾಸ ನಿರ್ಣಯಕ್ಕೆ 50ಕ್ಕೂ ಹೆಚ್ಚು ಸಂಸದರ ಬೆಂಬಲ ಬೇಕು. ಸಂಸದರ ಸಂಖ್ಯೆಯನ್ನು ಎಣಿಕೆ ಮಾಡಿದ ಬಳಿಕ ಬಿರ್ಲಾ ಅಂಗೀಕಾರ ನೀಡಿದ್ದು, ಚರ್ಚೆಯ ಸಮಯವನ್ನು ನಿಗದಿಪಡಿಸಿ ಸದನಕ್ಕೆ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸದನ ಆರಂಭವಾಗುತ್ತಿದ್ದಂತೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಗೊಗೊಯ್ ಅವರಿಂದ ನೋಟಿಸ್ ಸ್ವೀಕರಿಸಲಾಗಿದೆ ಎಂದು ಸ್ಪೀಕರ್ ಹೇಳಿದರು. ಇದೇವೇಳೆ, ನಿರ್ಣಯದ ಅಂಗೀಕಾರವನ್ನು ಬೆಂಬಲಿಸುವ ಸದಸ್ಯರನ್ನು ಎದ್ದು ನಿಲ್ಲುವಂತೆ ಬಿರ್ಲಾ ಕೋರಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸದಸ್ಯರು ತಲೆ ಎಣಿಕೆಗಾಗಿ ಎದ್ದುನಿಂತರು. ಸಂಸದರ ಸಂಖ್ಯೆಯನ್ನು ಎಣಿಕೆ ಮಾಡಿದ ಸ್ಪೀಕರ್ ನಿರ್ಣಯವನ್ನು ಒಪ್ಪಿಕೊಂಡರು.
ಎಲ್ಲ ಪಕ್ಷಗಳೊಂದಿಗೆ ಸಮಾಲೋಚಿಸಿದ ನಂತರ ನಿರ್ಣಯದ ಮೇಲಿನ ಚರ್ಚೆಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುವುದು ಎಂದು ಬಿರ್ಲಾ ಹೇಳಿದರು. ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡುವಂತೆ ಒತ್ತಾಯಿಸಲು 26 ವಿರೋಧ ಪಕ್ಷಗಳ ಒಕ್ಕೂಟವು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನಿರ್ಧರಿಸಿದ್ದವು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯವು ಅಂಕಿಅಂಶ ಪರೀಕ್ಷೆಯಲ್ಲಿ ಸೋಲುತ್ತದೆಯಾದರೂ ಚರ್ಚೆಯ ಸಮಯದಲ್ಲಿ ಮಣಿಪುರ ವಿಷಯದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ವಿಪಕ್ಷಗಳ ತಂತ್ರವಾಗಿದೆ. ಅಲ್ಲದೆ, ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಮೋದಿಯವರ ಬಾಯಿ ಬಿಡಿಸುವುದೂ ಇದರ ಹಿಂದಿನ ಕಾರ್ಯತಂತ್ರವಾಗಿದೆ ಎಂದೂ ಅವರು ಹೇಳಿದ್ದಾರೆ. ಈ ಮಧ್ಯೆ, ಮಣಿಪುರ ಗಲಭೆ ಕುರಿತ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.