ರಸ್ತೆಯಲ್ಲಿ ಬಿರುಕು – ಆಗುಂಬೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ಬ್ರೇಕ್

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿರುವ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಆದೇಶ  ಹೊರಡಿಸಿದ್ದಾರೆ.

ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರ ಮಾಹಿತಿ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತೀರ್ಥಹಳ್ಳಿ ಉಡುಪಿ ರಸ್ತೆಯ ಆಗುಂಬೆ ಘಾಟಿಯ 6, 7 ಮತ್ತು 11ನೇ ತಿರುವಿನಲ್ಲಿ ಭಾರಿ ಮಳೆಯಿಂದ ಮತ್ತು ಭಾರಿ ವಾಹನಗಳ ಓಡಾಟದಿಂದಾಗಿ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತವು ಕಾಣಿಸಿಕೊಂಡಿದೆ. ಹೆಚ್ಚಿನ ಮಳೆಯಿಂದಾಗಿ ತಡೆಗೋಡೆ ಕುಸಿದಿರುವುದು ಕಂಡುಬಂದಿದ್ದು, ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಸೂಕ್ತವಲ್ಲ. ಇದರಿಂದ ರಸ್ತೆ ಮತ್ತಷ್ಟು ಕುಸಿದು ಅಪಘಾತ ಆಗುವ ಸಂಭವವಿದೆ.

ತಾತ್ಕಾಲಿಕವಾಗಿ ಜುಲೈ 27 ರಿಂದ ಸೆಪ್ಟೆಂಬರ್ 15ರವರೆಗೆ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುತ್ತದೆ, ಭಾರಿ ವಾಹನ ಸಂಚಾರ ನಿರ್ಬಂಧ ಅಗತ್ಯವೆಂದು ಮನವರಿಕೆ ಆಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದವರು ವಿವರಿಸಿದ್ದಾರೆ. ಆಗುಂಬೆ ಘಾಟ್ ನಲ್ಲಿ ಘನ ವಾಹನಗಳಿಗೆ ನಿರ್ಬಂಧ ಹೇರಲಾದ ಕಾರಣ ತೀರ್ಥಹಳ್ಳಿಯಿಂದ ಉಡುಪಿಗೆ ತೆರಳುವವರು ಬದಲಿ ಮಾರ್ಗ ಅನುಸರಿಸಬಹುದು. ತೀರ್ಥಹಳ್ಳಿ ಮಾಸ್ತಿಕಟ್ಟೆ ಸಿದ್ದಾಪುರ ಕುಂದಾಪುರ ಮೂಲಕ ಉಡುಪಿಗೆ ಬರಬಹುದು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here