ಮಂಗಳೂರು(ಬೆಂಗಳೂರು): ಉಡುಪಿ ಕಾಲೇಜೊಂದರ ವಾಶ್ ರೂಮೊಂದರಲ್ಲಿ ಯುವತಿಯೊಬ್ಬಳ ವಿಡಿಯೋ ಚಿತ್ರೀಕರಿಸಿರುವ ಆರೋಪದ ಪ್ರಕರಣ ಕುರಿತು ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಪರಮೇಶ್ವರ್ ವಿಡಿಯೋ ಚಿತ್ರೀಕರಣ ಮಕ್ಕಳ ಆಟವೆಂದು ಹೇಳಿಲ್ಲ ಎಂದು ಹೇಳಿದ್ದಾರೆ.
ಇಂತಹ ಘಟನೆಗಳು ಸ್ನೇಹಿತರ ಬಳಗದಲ್ಲಿ ನಡೆಯುತ್ತದೆ, ಅದೆಲ್ಲ ಅಲ್ಲಿಗೆ ಬಿಟ್ಟು ಹೋಗುತ್ತಿತ್ತು ಎಂದು ಹೇಳಿದ್ದು, ಅಂತಹ ಘಟನೆ ಕುರಿತು ಪ್ರಾಂಶುಪಾಲರು ಕ್ರಮ ಕೈ ತೆಗೆದುಕೊಳ್ಳಲು ಬಿಡಬೇಕು. ಇಲ್ಲಿ ಸಸ್ಪೆಂಡ್ ಮಾಡುವುದೋ ಅಥವಾ ಇನ್ನು ಹೆಚ್ಚಿನ ಕ್ರಮ ಬೇಕೋ ಇದೆಲ್ಲವೂ ಅವರಿಗೆ ಸಂಬಂಧಪಟ್ಟಿದ್ದು ಎಂದು ಹೇಳಿದ್ದಾರೆ. ನಾವು ಕಾಲೇಜು ವಿಚಾರಕ್ಕೆ ಮಧ್ಯಪ್ರವೇಶ ಮಾಡಬಾರದು. ಇನ್ನು ಘಟನೆ ಕುರಿತು ಈಗಾಗಲೇ ಪೊಲೀಸರು ಸೊಮೋಟೋ ಕೇಸು ದಾಖಲಿಸಿಕೊಂಡಿದ್ದಾರೆ. ತನಿಖೆ ಆಗುತ್ತೆ, ಸತ್ಯಾಸತ್ಯತೆ ಹೊರ ಬರುತ್ತೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಘಟನೆಗೆ ಸಂಬಂಧಿಸಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಅಜ್ಜರಕಾಡಿನ ಹುತಾತ್ಮರ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ಸಂತ್ರಸ್ತೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿದರು. ಇದೇ ವೇಳೆ ಗೃಹ ಸಚಿವರ ಮನೆಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.