ಬಿ.ಸಿ.ರೋಡ್ ನಲ್ಲಿ ಅನೈತಿಕ ಪೊಲೀಸ್ ಗಿರಿ – ಪೊಲೀಸ್ ಸಿಬ್ಬಂದಿ ಮೇಲೆ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ

ಮಂಗಳೂರು(ಬಂಟ್ವಾಳ): ಬಿ.ಸಿ.ರೋಡ್ ನಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬಗ್ಗೆ ವರದಿಯಾಗಿದ್ದು, ಮುಸ್ಲಿಂ ಎಂದು ಭಾವಿಸಿ ಪೊಲೀಸ್ ಸಿಬ್ಬಂದಿಗೇ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಬಂಧಿತ ಆರೋಪಿಗಳು. ಬಂಟ್ವಾಳ ಡಿ.ವೈ.ಎಸ್.ಪಿ. ಕಚೇರಿಯ ಪೊಲೀಸ್ ಸಿಬ್ಬಂದಿ ಕುಮಾರ್ ಹನಮಂತಪ್ಪ ಅವರ ಕುಟುಂಬದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಕುಮಾರ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಜು.27 ರಂದು ರಾತ್ರಿ ಪತ್ನಿ ಹಾಗೂ ನಾದಿನಿ ಜೊತೆ ಬಿ.ಸಿ.ರೋಡಿನ ಹೊಟೇಲ್ ಒಂದರಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಾರ್ ಒಂದರ ಮುಂಭಾಗದಲ್ಲಿ ನಿಂತುಕೊಂಡಿದ್ದ ಆರೋಪಿಗಳು ಕುಮಾರ್ ಕುಟುಂಬವನ್ನು ಹಿಂಬಾಲಿಸಿದ್ದಾರೆ ಎನ್ನಲಾಗಿದೆ. ಕುಮಾರ್ ಪತ್ನಿ ಮತ್ತು ನಾದಿನಿಯನ್ನು ವಸತಿಗೃಹದ ಬಳಿ ಬಿಟ್ಟು ಕರ್ತವ್ಯಕ್ಕೆ ಹಿಂತಿರುಗುತ್ತಿದ್ದಂತೆ ಬೈಕ್ ನಲ್ಲಿ ಬಂದ ಆರೋಪಿಗಳು ಅಡ್ಡಗಟ್ಟಿದ್ದಾರೆ. ಆಗ ಕುಮಾರ್ ಅವರು ತಾನು ಪೊಲೀಸ್ ಎಂದು ಹೇಳಿದರೂ ಕೇಳದ ಆರೋಪಿಗಳು, “ನೀನು ಪೊಲೀಸ್ ಅಲ್ಲ, ನೀನು ಬ್ಯಾರಿ. ಈಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀಯಾ” ಎಂದು ಅಸಭ್ಯವಾಗಿ ವರ್ತಿಸಿದ್ದಾರೆ. ಇಲ್ಲಿನ ವಿಚಾರ ನಿನಗೆ ಗೊತ್ತಿಲ್ಲ ಎಂದು ಬೆದರಿಕೆ ಹಾಕಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಕುಮಾರ್ ಅವರ ಪತ್ನಿಯ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪಿಗಳು ಅವರ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ. ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿದಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

LEAVE A REPLY

Please enter your comment!
Please enter your name here