ರಾಜ್ಯದಲ್ಲಿ ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ

ಮಂಗಳೂರು(ಬೆಂಗಳೂರು): ಕೃಷಿಯೇತರ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ಪರಿವರ್ತಿಸುವುದಕ್ಕೆ ಅವಕಾಶ ಮಾಡಿಕೊಡುವ ಕರ್ನಾಟಕ ಭೂಕಂದಾಯ ತಿದ್ದುಪಡಿ ಮಸೂದೆ 2023 ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಕಾಯ್ದೆಯು ತಕ್ಷಣದಿಂದಲೇ ಜಾರಿ ಬಂದಿದೆ. ಈ ಕಾಯ್ದೆಯಿಂದಾಗಿ ಅರ್ಜಿದಾರ ಸ್ವಯಂ ಘೋಷಣೆಯ ಮೂಲಕವೇ ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಪರಿವರ್ತಿಸಲು ಅವಕಾಶ ನೀಡಲಾಗಿದೆ.

ಕೃಷಿಯೇತರ ಉದ್ದೇಶಗಳಿಗಾಗಿ ಮಾಸ್ಟರ್‌ ಪ್ಲಾನ್‌ ಮಾಡಲಾಗಿರುವ ಭೂಮಿಯನ್ನು ಆ ಮಾಸ್ಟರ್‌ ಪ್ಲಾನ್‌ನಲ್ಲಿ ಉಲ್ಲೇಖಿಸಿರುವ ಉದ್ದೇಶಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಬೇಕಿಲ್ಲ. ಯಾವುದೇ ಮಾಸ್ಟರ್‌ ಪ್ಲಾನ್‌ ಇಲ್ಲದ ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ ಭೂಮಿಯನ್ನು ಪರಿವರ್ತನೆ ಮಾಡಿಕೊಳ್ಳಲು ಅರ್ಜಿದಾರರು ಪ್ರಮಾಣಪತ್ರ ಸಲ್ಲಿಸಬೇಕು. 30 ದಿನಗಳಲ್ಲಿ ಆದೇಶ ನೀಡದೇ ಇದ್ದರೆ, ಭೂಪರಿವರ್ತನೆಯನ್ನು ಅನುಮೋದಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಈ ಮಸೂದೆಯೂ ಸೇರಿ ಒಟ್ಟು ಒಂಭತ್ತು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಎಲ್ಲವನ್ನೂ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಮಿ ಪರಭಾರೆಗೆ ಸಂಬಂಧಿಸಿದ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ ತಿದ್ದುಪಡಿ ಅಧಿನಿಯಮ ಮಸೂದೆ 2023ಕ್ಕೆ ಅಂಗೀಕಾರ ನೀಡಲಾಗಿದೆ. ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಮಸೂದೆ, ಕರ್ನಾಟಕ ಧನ ವಿನಿಯೋಗ ಮಸೂದೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ಮಸೂದೆ,ಕರ್ನಾಟಕ ಅಗ್ನಿ ಶಾಮಕ ತಿದ್ದುಪಡಿ ಮಸೂದೆ, ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ಮಸೂದೆ, ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅಂಕಿತ ಹಾಕಿದ್ದಾರೆ.

LEAVE A REPLY

Please enter your comment!
Please enter your name here