ಮಂಗಳೂರು: ಕೆ.ಎಂ ಮಾಮನ್ ಮಾಪಿಳ್ಳೆ 1940ರ ದಶಕದ ಸ್ವತಂತ್ರ ಪೂರ್ವ ಭಾರತದ ಅಂದಿನ ಮದ್ರಾಸ್ ನಗರದಲ್ಲಿ ಸ್ವಂತ ಒಂದು ಬಲೂನ್ ಫ್ಯಾಕ್ಟರಿಯನ್ನು ಇಟ್ಟುಕೊಂಡು ನಗರದ ಬೀದಿಗಳಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಕ್ತಿ. ಆದರೆ ಈತ ಬಡತನದಿಂದಲೇ ಬಂದ ವ್ಯಕ್ತಿಯಾ ಅಂತ ಕೇಳಿದರೆ ಖಂಡಿತವಾಗಿಯೂ ಅಲ್ಲ. ಒಂಬತ್ತು ಜನ ಮಕ್ಕಳ ತುಂಬು ಕುಟುಂಬದಲ್ಲಿ ಹುಟ್ಟಿದ ಮಾಮನ್ ಮಾಪಿಳ್ಳೆಯ ತಂದೆ ದೊಡ್ಡ ಶ್ರೀಮಂತರಾಗಿದ್ದು ಒಂದು ನ್ಯೂಸ್ ಪೇಪರ್ ಮತ್ತು ಬ್ಯಾಂಕನ್ನು ನಡೆಸುತ್ತಿದ್ದರು. ಆದರೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದರು ಎನ್ನುವ ಆರೋಪದ ಮೇರೆಗೆ ಅಂದಿನ ತಿರುವಂಕೂರ್ ರಾಜಮನೆತನ ಒಂದೇ ದಿನ ರಾತ್ರಿ ಇವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕುತ್ತದೆ. ಪರಿಣಾಮ ಶ್ರೀಮಂತ ಕುಟುಂಬ ಒಂದೇ ದಿನಕ್ಕೆ ಬೀದಿಗೆ ಬಂದುಬಿಡುತ್ತದೆ. ಆದರೆ ಬದುಕಬೇಕು ಎನ್ನುವ ಛಲ ಇದ್ದ ಮಾಮನ್ ಮಾಪಿಳ್ಳೆ ತಮ್ಮದೇ ಆದ ಬಲೂನ್ ವ್ಯಾಪಾರವನ್ನು ಶುರು ಮಾಡುತ್ತಾರೆ. ಬಲೂನ್ ಮಾರುತ್ತಿದ್ದ ಇವರ ಬದುಕು ಬದಲಾಗುವುದು 1950ರಲ್ಲಿ.
ಒಮ್ಮೆ ಅವರ ಕಸಿನ್ ಒಬ್ಬ ಮಾಡುತ್ತಿದ್ದ ಟೈಯರ್ ವ್ಯಾಪಾರವನ್ನು ನೋಡಲು ಹೋಗುತ್ತಾರೆ. ಆತ ಮಾಡುತ್ತಿದ್ದು ಟೈರ್ ರೀಟ್ರೀಡ್ ಅಂದ್ರೆ ಹಳೆಯ ಟೈರುಗಳನ್ನು ರೀಸೋಲ್ ಮಾಡಿಕೊಡುವುದು. ಆದರೆ ಅಲ್ಲಿ ಅವರು ಕಂಡ ಒಂದು ಸತ್ಯ ಏನೆಂದರೆ ಇದಕ್ಕೆ ಬೇಕಾದ ರಬ್ಬರ್ ದೇಶದ ಯಾವ ಕಂಪನಿಯೂ ಮಾಡುತ್ತಿಲ್ಲ ಎಲ್ಲವೂ ಹೊರಗಿನಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಮೊದಲೇ ವ್ಯಾಪಾರಿಯಾಗಿದ್ದ ಮಾಪಿಳ್ಳೆಗೆ ನಾನೇ ಯಾಕೆ ಈ ರಬ್ಬರ್ ಉತ್ಪಾದಿಸಬಾರದು ಎಂಬ ಒಂದು ಐಡಿಯಾ ಹೊಳೆಯುತ್ತದೆ. ಹಾಗೆ 1952 ರಲ್ಲಿ ಶುರುವಾಗುವ ಕಂಪನಿಯ ಹೆಸರು ಮದ್ರಾಸ್ ರಬ್ಬರ್ ಫ್ಯಾಕ್ಟರಿ ಲಿಮಿಟೆಡ್. ಟಯರ್ ರೀ ಟ್ರೀಡಿಂಗ್ ಗೆ ಬೇಕಾದ ರಬ್ಬರ್ ಉತ್ಪಾದನೆ ಮಾಡಲು ಶುರು ಮಾಡುತ್ತಾರೆ. ಎಲ್ಲಿಯವರೆಗೆ ಯಶಸ್ವಿಯಾಗುತ್ತಾರೆ ಅಂದರೆ ಕೇವಲ ಐದೇ ವರ್ಷಗಳಲ್ಲಿ ದೇಶದ 50% ಮಾರ್ಕೆಟ್ ಪಾಲು ಎಂ ಆರ್ ಎಫ್ ಹೊಂದುತ್ತದೆ.
ಇದನ್ನೇ ಮಾಡುತ್ತಿದ್ದರೆ ಇಂತಿಷ್ಟೇ ಲಾಭ ಮಾತ್ರ. ಇದರ ಬದಲು ನಾನೇ ಯಾಕೆ ಹೊಸ ಟೈರು ಶುರು ಮಾಡಬಾರದು ಎಂಬ ಆಲೋಚನೆ ಮಾಪಿಳ್ಳೆಯವರಿಗೆ ಬರುತ್ತದೆ. ಆಲೋಚನೆ ಬಂದ ಕೂಡಲೇ ಯಶಸ್ವಿಯಾಗಬೇಕೆಂದೇನೂ ಇಲ್ಲ. ಅದಕ್ಕೆ ಬೇಕಾದ ಇನ್ಫ್ರಾ ಸ್ಟ್ರಕ್ಚರ್ ಬೇಕು, ಸೈನ್ಸ್ ಬೇಕು. ಸ್ವತಂತ್ರ ಸಿಕ್ಕಿ 10 – 12 ವರ್ಷಗಳಾಗಿದ್ದ ದೇಶದಲ್ಲಿ ಇದ್ಯಾವುದಕ್ಕೂ ಅವಕಾಶವಿರಲಿಲ್ಲ. ಹಾಗಾದ್ರೆ ಇದು ಇನ್ನೊಬ್ಬರಿಂದ ಪಡೆಯಬೇಕು ಅಥವಾ ಕಲಿಯಬೇಕು ಅನ್ನುವಾಗ ಅವರು ಟೈ ಅಪ್ ಮಾಡಿಕೊಳ್ಳುವುದು ಅಮೆರಿಕದ ಮ್ಯಾನ್ ಫೀಲ್ಡ್ ಟೈರ್ ಕಂಪನಿಯ ಜೊತೆ. 1961 ರಲ್ಲಿ ಎಂ ಆರ್ ಎಫ್ ಕಂಪನಿಯ ಮೊದಲ ಟೈಯರ್ ಹೊರಗೆ ಬರುತ್ತದೆ. ಇದನ್ನು ಉದ್ಘಾಟನೆ ಮಾಡಿದವರು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಕೆ. ಕಾಮರಾಜ್.
ಆದರೆ ಮೊದಲಿಗೆ ಇವರಿಗೆ ಎದುರಾದ ಸಮಸ್ಯೆ ಏನೆಂದರೆ ಮ್ಯಾನ್ ಫೀಲ್ಡ್ ಕಂಪನಿಗೆ ಟೈರ್ ಮಾಡಲು ಗೊತ್ತಿತ್ತೇ ವಿನಃ ಭಾರತದ ರಸ್ತೆಗಳ ಪರಿಚಯವಿರಲಿಲ್ಲ. ಅವರದ್ದು ಏನಿದ್ದರೂ ಅಮೆರಿಕನ್ ಸ್ಟ್ಯಾಂಡರ್ಡ್. ಆದ್ದರಿಂದ ಇವರ ಟೈರುಗಳು ಹೆಚ್ಚು ಕಾಲ ಬಾಳಿಕೆ ಬರುತ್ತಿರಲಿಲ್ಲ. ಇದು ಮಾಮನ್ ಮಾಪಿಳ್ಳೆಗೆ ಎದುರಾದ ಅತಿ ದೊಡ್ಡ ಚಾಲೆಂಜ್. ಇದಕ್ಕೋಸ್ಕರ 1963 ರಲ್ಲಿ ತಮಿಳುನಾಡಿನಲ್ಲಿ ಒಂದು ರಬ್ಬರ್ ರಿಸರ್ಚ್ ಇನ್ಸ್ಟಿಟ್ಯೂಟ್ ಶುರು ಮಾಡುತ್ತಾರೆ.
ಭಾರತದ ರಸ್ತೆಗಳಿಗೆ ಯಾವ ರೀತಿಯ ಟೈರುಗಳು ಬೇಕು ಎನ್ನುವುದನ್ನು ಕಲಿಯಲು. ಆಗ ಇವರಿಗೆ ಕಂಡ ಇನ್ನೊಂದು ದೊಡ್ಡ ಸಮಸ್ಯೆ ಏನಂದರೆ ದೇಶದಲ್ಲಿ ಟೈರು ಉತ್ಪಾದಿಸುವ ಯಾವುದೇ ಸ್ವದೇಶಿ ಕಂಪನಿ ಇರದ ಕಾರಣ ಡನ್ ಲಪ್, ಗುಡ್ ಈಯರ್, ಫಯರ್ ಸ್ಟೋನ್ ಎನ್ನುವ ಮೂರು ವಿದೇಶಿ ಕಂಪನಿಗಳು ತಮಗೆ ಮನ ಬಂದ ಹಾಗೆ ಬೇಕಾಬಿಟ್ಟಿಯಾಗಿ ದರಗಳನ್ನು ಫಿಕ್ಸ್ ಮಾಡಿಕೊಂಡು ಮಾರಾಟ ಮಾಡುತ್ತಿತ್ತು. ಭಾರತ ಸರಕಾರಕ್ಕೆ ಕೂಡ ಟೈರು ಸಪ್ಲೈ ಮಾಡುತ್ತಿದ್ದದ್ದು ಅವರುಗಳೇ. ಇವರ ದೆಸೆಯಿಂದ ಎಂ ಆರ್ ಎಫ್ ಗೆ ಮಾರ್ಕೆಟ್ ಎಂಟ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಮಾಪಿಳ್ಳೆ ಅವರು ಇದರ ಬಗ್ಗೆ ಕೇಂದ್ರ ಸರಕಾರಕ್ಕೆ ತಿಳಿಸುತ್ತಾರೆ ಕೂಡ. ಅಗ ಸರಕಾರಕ್ಕೆ ಅರ್ಥವಾದ ಒಂದು ಮುಖ್ಯ ಸಂಗತಿ ಏನಂದರೆ ಒಂದು ವೇಳೆ ಯುದ್ಧದಂತಹ ಎಮರ್ಜೆನ್ಸಿಗಳು ಬಂದಾಗ ವಿದೇಶಿ ಕಂಪನಿಗಳು ಟೈರು ಸಪ್ಲೈ ಮಾಡಲು ಆಗುವುದಿಲ್ಲ ಎಂದು, ಕೈಕೊಟ್ಟರೆ ಸರಕಾರ ದೊಡ್ಡ ಸಮಸ್ಯೆಗೆ ಬೀಳುತ್ತದೆ ಎಂದು ಒಬ್ಬ ಭಾರತೀಯ ಟೈರು ಉತ್ಪಾದಕನನ್ನು ಸಪೋರ್ಟ್ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಬರುತ್ತದೆ.
ಇಲ್ಲಿಂದ ಎಂ ಆರ್ ಎಫ್ ಟೈಯರ್ ಉತ್ಪಾದನೆಯಲ್ಲಿ ವೇಗ ಪಡೆಯಲು ಶುರುವಾಗುತ್ತದೆ. ಆಗ ಎದುರಾಗುವ ಇನ್ನೊಂದು ಸಮಸ್ಯೆ ಏನೆಂದರೆ, ಇವರ ಟೈರುಗಳು ಹೋಗುತ್ತಿದ್ದದ್ದು ವಾಹನ ಕಂಪೆನಿಗಳಿಗೆ ಮಾತ್ರ. ವಾಲ್ಯೂಮ್ ಜಾಸ್ತಿ ಲಾಭ ಕಮ್ಮಿ. ರಿಟೇಲ್ ಮಾರಿ ಕನ್ಸ್ಯುಮರ್ ಗೆ ಡೈರೆಕ್ಟ್ ತಲುಪಬೇಕು ಎಂದರೆ ಏನು ಮಾಡಬೇಕು ಎನ್ನುವ ಆಲೋಚನೆ ಬಂದಾಗ ಇವರು ಹೋಗಿ ತಲುಪುವುದು ಅಂದಿನ ಜಾಹೀರಾತು ಲೋಕದ ದಿಗ್ಗಜ Alyque Padamsee ಯನ್ನು. ಭಾರತದಲ್ಲಿ ನೂರಕ್ಕೂ ಹೆಚ್ಚು ಬ್ರಾಂಡ್ ಗಳಿಗೆ ತನ್ನ ಕ್ರಿಯೇಟಿವಿಟಿ ಮೂಲಕ ಜೀವಕೊಟ್ಟ ಮಾರ್ಕೆಟಿಂಗ್ ಜೀನಿಯಸ್.
Alyque ಎಂ ಆರ್ ಎಫ್ ಟೈರುಗಳನ್ನು ಪಾಪ್ಯುಲರೈಸ್ ಮಾಡುವುದು ಹೇಗೆ ಎಂದು ನೇರವಾಗಿ ಹೋಗುವುದು ಎಂಡ್ ಕನ್ಸ್ಯೂಮರ್ ಗಳ ಹತ್ತಿರ ಅಂದ್ರೆ ಟ್ರಕ್ ಡ್ರೈವರ್ ಗಳ ಬಳಿ. ಒಂದು ಟೈರಿನಲ್ಲಿ ಏನೆಲ್ಲಾ ಬೇಕು ಅಂತ ಕೇಳಿದಾಗ ಡ್ರೈವರ್ ಗಳು ಹೇಳುವುದು ಸ್ಟ್ರಾಂಗ್ ಬೇಕು ಡ್ಯುರೇಬಿಲಿಟಿ ಬೇಕು ಮತ್ತು ಲಾಂಗ್ ಲಾಸ್ಟಿಂಗ್ ಬೇಕೆಂದು. ಆಗ Alyque ತರುವ ಕಾನ್ಸೆಪ್ಟ್ ಮಝಲ್ ಮ್ಯಾನ್. ಒಬ್ಬ ಬಲಾಢ್ಯನಾದ ವ್ಯಕ್ತಿ ಟೈರನ್ನು ಎತ್ತಿ ಹಿಡಿಯುವ ಚಿತ್ರ.
ದೇಶದಾದ್ಯಂತ ಜಾಹೀರಾತು ಕಾಣಿಸಲು ಶುರುವಾಗುತ್ತದೆ. ಜನರಿಗೆ ಎಂ ಆರ್ ಎಫ್ ಅಂದ್ರೆ ಸ್ಟ್ರಾಂಗ್ ಅಂತ ಅನಿಸಲು ತೊಡಗುತ್ತದೆ. ಇದರಿಂದ ಟೈಯರ್ ಚೇಂಜ್ ಮಾಡುವ ಪ್ರತಿಯೊಬ್ಬ ವಾಹನ ಮಾಲೀಕನು ಎಂ ಆರ್ ಎಫ್ ಗೆ ಹೋದರೆ ಹೇಗೆ ಎಂದು ಆಲೋಚಿಸಲು ಶುರು ಮಾಡುತ್ತಾರೆ. So ಅಲ್ಲಿಂದ ಯಶಸ್ಸಿನ ಮಹಾಪೂರಗಳೇ ಹರಿದು ಬರಲು ತೊಡಗುತ್ತದೆ. ಇಂದು 30% ಮಾರ್ಕೆಟ್ ಶೇರ್ ಇರುವ ಎಂ ಆರ್ ಎಫ್, ಟೈರ್ ಲೋಕದಲ್ಲಿ ನಿಜಕ್ಕೂ ಒಬ್ಬ ಮಸಲ್ ಮ್ಯಾನ್ ಆಗಿ ನಿಂತುಕೊಂಡಿದೆ. ಇದು ಅವಕಾಶಗಳನ್ನು ಹುಡುಕಿಕೊಂಡು ಅದನ್ನು ಸದ್ಬಳಕೆ ಮಾಡಿದ ಒಬ್ಬ ಯಶಸ್ವಿ ಟೈರು ಉತ್ಪಾದಕನ ಕಥೆ.
ಮಾಹಿತಿ/ಚಿತ್ರ
ಇಕ್ಬಾಲ್ ಪುತ್ತೂರು.
( ಸಂಪೋಲಿ )