ಐಸಿಸ್ ಜೊತೆ ಸಂಪರ್ಕ, ಪುಣೆಯ ಖ್ಯಾತ ವೈದ್ಯನನ್ನು ಬಂಧಿಸಿದ ಎನ್ಐಎ 

ಮಂಗಳೂರು(ಪುಣೆ): ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಸುಮಾರು 18 ಪುಸ್ತಕಗಳ ಲೇಖಕ ಪುಣೆಯ ಪ್ರಖ್ಯಾತ ಚಿನ್ನದ ಪದಕ ಪುರಸ್ಕೃತ ವೈದ್ಯನನ್ನು ಉಗ್ರರ ಜೊತೆ ನಂಟಿರುವ ಆರೋಪದ ಹಿನ್ನೆಲೆಯಲ್ಲಿ ಎನ್ಐಎ ಬಂಧಿಸಿದೆ. ಬಂಧಿತ ವೈದ್ಯನನ್ನು ಅದ್ನಾನ್‌ ಅಲಿ ಸರ್ಕಾರ್‌ (43) ಎಂದು ಗುರುತಿಸಲಾಗಿದೆ.

ಪ್ರಪಂಚದಲ್ಲೇ ಗುರುತಿಸಿಕೊಂಡಿರುವ ಭಯೋತ್ಪಾದಕ ಸಂಘಟನೆ ಐಸಿಸ್‌ನ ಶಂಕಿತ ಭಯೋತ್ಪಾದಕರೊಂದಿಗೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಹಾಗೂ ಐಸಿಸ್‌ನ ಹಿಂಸಾತ್ಮಕ ಉಗ್ರ ಕೃತ್ಯಗಳನ್ನು ಬೆಂಬಲಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈತನನ್ನು ರಾಷ್ಟ್ರೀಯ ತನಿಖಾ ದಳ, ಎನ್‌ಐಎ ಬಂಧಿಸಿದೆ.

ವೃತ್ತಿಯಲ್ಲಿ ವೈದ್ಯನಾಗಿದ್ದ ಹಾಗೂ ತನ್ನ ವೃತ್ತಿಯೊಂದಿಗೆ ಹೆಸರುವಾಸಿಯಾಗಿದ್ದ ಅದ್ನಾನ್‌ ಅಲಿ ಸರ್ಕಾರ್‌ (43) ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತಿದ್ದ ಎನ್ನಲಾಗಿದೆ. ಐಸಿಸ್‌ ಜಾಲದಲ್ಲಿ ಸಿಲುಕಿ ಸದ್ಯ ಸೆರೆಯಾಗಿರುವ ವ್ಯಕ್ತಿ ಸಾಮಾನ್ಯನಲ್ಲ. ತನ್ನ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಈ ವೈದ್ಯ ವಿಶೇಷ ಅರವಳಿಕೆ ತಜ್ಞನಾಗಿದ್ದು ಇಂಗ್ಲಿಷ್‌, ಮರಾಠಿ, ಹಿಂದಿ ಮತ್ತು ಜರ್ಮನ್‌ ಭಾಷೆಗಳನ್ನು ಮಾತನಾಡಬಲ್ಲವನಾಗಿದ್ದಾನೆ.

ಜುಲೈ 3 ರಂದು ಮುಂಬೈ, ಥಾಣೆ ಮತ್ತು ಪುಣೆಯಲ್ಲಿ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ವೈದ್ಯ ಅದ್ನಾನ್‌ ಸೇರಿದಂತೆ ಎನ್‌ಐಎ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ಈ ಎಲ್ಲಾ ಆರೋಪಿಗಳು ಐಸಿಸ್‌ನ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸಿದ್ದರು ಎಂಬ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಕೊಂಡ್ವಾದಲ್ಲಿರುವ ಬಂಧಿತ ವೈದ್ಯನ ಮನೆಯಲ್ಲಿ ಶೋಧ ನಡೆಸಿದಾಗ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು, ಐಸಿಸ್‌ಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವಾರು ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here