ಮಂಗಳೂರು(ಭೋಪಾಲ್): ಮಧ್ಯಪ್ರದೇಶದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರ ಹೆಸರಿಗೆ 7 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದ್ದು ಶಿಕ್ಷಕಿಯ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಉಷಾ ಸೋನಿ ಎಂಬವರು ಪಟಖೇಡ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು 2013 ರಲ್ಲಿ ಸಾವನ್ನಪ್ಪಿದ್ದಾರೆ. ಆದರೆ ನೋಟೀಸ್ ಕೋಡ್ 2017-18ರ ಮೌಲ್ಯಮಾಪನಕ್ಕೆ ಸಂಬಂಧಿಸಿದ್ದು ಎಂದು ಉಲ್ಲೇಖಿಸಲಾಗಿದೆ.
ಜುಲೈ 26 ರಂದು ಆಕೆಯ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದ್ದು, 7.55 ಕೋಟಿ ತೆರಿಗೆ ಪಾವತಿಗೆ ಆದೇಶ ನೀಡಿತ್ತು. ಈ ಹಿನ್ನಲೆ ಶಿಕ್ಷಕಿ ಅವರ ಮಗ ಪವನ್ ಸೋನಿ ʻನನ್ನ ತಾಯಿ 2013ರ ನವೆಂಬರ್ 16ರಂದೇ ದೀರ್ಘಕಾಲಿಕ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ನೋಟಿಸ್ 2017-18ರ ಮೌಲ್ಯ ಮಾಪನಕ್ಕೆ ಸಂಬಂಧಿಸಿದ್ದಾಗಿದೆ. ದಾಖಲೆಯಲ್ಲಿ ನ್ಯಾಚುರಲ್ ಕಾಸ್ಟಿಂಗ್ ಕಂಪನಿ ಎಂದು ಉಲ್ಲೇಖಿಸಲಾಗಿದೆ. ಅದು ಇನ್ನೂ ಖರೀದಿ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ನನ್ನ ತಾಯಿಯ ಪ್ಯಾನ್‌ಕಾರ್ಡ್ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ನೋಟಿಸ್ ಬಗ್ಗೆ ನಮಗೇನು ತಿಳಿದಿಲ್ಲ ಎಂದಿದ್ದಾರೆ. ಇದೇ ರೀತಿ ಬೇತುಲ್ ಜಿಲ್ಲೆಯ 44 ಮಂದಿಗೆ 1 ರಿಂದ 10 ಕೋಟಿ ರೂ.ಗಳ ವರೆಗೆ ತೆರಿಗೆ ನೋಟೀಸ್ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.