ಮಂಗಳೂರು/ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿನಿಯರ ಫೋಟೊಗಳನ್ನು ಬೇರೊಬ್ಬರ ನಗ್ನದೇಹ ಚಿತ್ರಗಳಿಗೆ ಅಂಟಿಸಿ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಆರೋಪಿಗಾಗಿ ಹುಬ್ಬಳ್ಳಿಯ ಪೊಲೀಸರು ಶುಕ್ರವಾರ ಶೋಧ ಆರಂಭಿಸಿದ್ದಾರೆ. ನಗರದ ಖಾಸಗಿ ಕಾಲೇಜ್ವೊಂದರ ನಾಲ್ಕು ವಿದ್ಯಾರ್ಥಿನಿಯರು ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಡಿಸಿಪಿ ಗೋಪಾಲ ಬ್ಯಾಕೋಡ್ ನೇತೃತ್ವದ ತಂಡವು ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ.
ಘಟನೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯರು ಮೂರು ತಿಂಗಳ ಹಿಂದೆಯೇ ಕಾಲೇಜಿನ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರು. ಇಷ್ಟು ದಿನ ಕಳೆದರೂ ಕಾಲೇಜಿನವರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಇದಲ್ಲದೇ, ಠಾಣೆಗೂ ದೂರು ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆಯೊಂದನ್ನು ತೆರೆದಿರುವ ಆರೋಪಿಯು, ಫೋಟೊಗಳನ್ನು ಅಪ್ಲೋಡ್ ಮಾಡಿದ್ದಾನೆ. ಇದರ ಜೊತೆಗೆ, ‘ದಮ್ ಇದ್ದರೆ ನನ್ನ ಹಿಡಿಯಿರಿ’ ಎಂದು ಪೊಲೀಸರಿಗೆ ಸವಾಲು ಹಾಕುವ ಪೋಸ್ಟ್ ಕೂಡ ಮಾಡಿದ್ದಾನೆ. ‘ಪಾಲಿಟಿಕ್ಸ್ + ಪೊಲೀಸ್ + ಸೈಬರ್ … ಅರ್ಥ ಮಾಡ್ಕೋರಿ ಲೇ.. ನನ್ನ ಏನ…. ಮಾಡ್ಲಿಕು ಆಗೋದಿಲ್ಲ‘ ಎಂದು ಅಶ್ಲೀಲವಾಗಿ ಕನ್ನಡದಲ್ಲಿ ಬರೆದುಕೊಂಡಿದ್ದಾನೆ. ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತ ಸಂತೋಷ ಬಾಬು ಮಾತನಾಡಿ, ‘ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಖಾಸಗಿ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರ ಬಗ್ಗೆ ದೂರು ಕೊಟ್ಟಿದ್ದಾರೆ. ಕಾಲೇಜಿಗೆ ಹೋಗಿ ಕೆಲ ವ್ಯಕ್ತಿಗಳನ್ನು ವಿಚಾರಣೆ ಮಾಡಿದ್ದೇವೆ. ಯುವತಿಯರಿಗೆ ಅನುಮಾನ ಇದ್ದವರನ್ನು ಠಾಣೆಗೆ ಕರೆದು ವಿಚಾರಣೆ ಮಾಡುತ್ತಿದ್ದೇವೆ’ ಎಂದರು.‘ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ರೀತಿಯ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಈ ಘಟನೆ ಮೂರು ತಿಂಗಳ ಹಿಂದೆಯೇ ನಡೆದಿದೆ. ಇದರ ಬಗ್ಗೆ ಕಾಲೇಜಿನವರೇ ಮಾಹಿತಿ ಕೊಡಬೇಕಿತ್ತು. ಯಾಕೆ ಕೊಟ್ಟಿಲ್ಲ ಎನ್ನುವ ಬಗ್ಗೆಯೂ ವಿಚಾರಣೆ ನಡೆಸಿದ್ದೇವೆ’ ಎಂದು ಹೇಳಿದರು.
‘ಯುವತಿಯರು ಹೇಳೋ ಹಾಗೆ; ಕಾಲೇಜಿನಲ್ಲಿ ನಡೆಯೋ ಚಟುವಟಿಕೆಗಳು ಆರೋಪಿಗೆ ಎಲ್ಲಾ ಗೊತ್ತಾಗಿವೆ. ಹೀಗಾಗಿ ಈ ಕೆಲಸ ಮಾಡಿದ್ದು ವಿದ್ಯಾರ್ಥಿ ಇರಬಹುದು ಎನ್ನುವ ಅನುಮಾನ ಇದೆ. ಯಾರು ಮಾಡಿದ್ದಾರೆ ಎನ್ನುವುದನ್ನು ನಾವು ಪತ್ತೆ ಹಚ್ಚುತ್ತೇವೆ’ ಎಂದು ತಿಳಿಸಿದರು.