ಚಾಕಲೆಟ್‌ನಲ್ಲಿ ಗಾಂಜಾ ಅಂಶ ಪತ್ತೆ ಪ್ರಕರಣ – ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಗಳೂರು: ಇತ್ತೀಚೆಗೆ ಎರಡು ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದ್ದ ಬಾಂಗ್‌ ಚಾಕಲೆಟ್‌ಗಳಲ್ಲಿ ಗಾಂಜಾ ಅಂಶ ಇರುವುದು ದೃಢಪಟ್ಟಿದ್ದು, ಅದನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ನೀಡಲಾಗಿದೆ. ಬಂಧಿತರನ್ನು ವಿ.ಟಿ. ರೋಡ್‌ನ‌ ಮನೋಹರ ಶೇಟ್ (49) ಮತ್ತು ಉತ್ತರ ಪ್ರದೇಶ ಮೂಲದ ಬೆಚನ್‌ ಸೋನ (45) ಎಂದು ಗುರುತಿಸಲಾಗಿದೆ.

ಜು. 19ರಂದು ಮಂಗಳೂರು ನಗರದ ಉತ್ತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಕಾರ್‌ಸ್ಟ್ರೀಟ್‌ನಲ್ಲಿ ಪೂಜಾ ಪ್ಯಾಲೇಸ್‌ ಕಟ್ಟಡದಲ್ಲಿರುವ ವೈಭವ್‌ ಪೂಜಾ ಸೇಲ್ಸ್‌ ಎಂಬ ಅಂಗಡಿಗೆ ದಾಳಿ ಮಾಡಿ ಅದರ ಮಾಲಕ ಮನೋಹರ್‌ ಶೇಟ್‌ ಮಾರಾಟ ಮಾಡುತ್ತಿದ್ದ 48,000 ರೂ. ಮೌಲ್ಯದ ತಲಾ 40 ಬಾಂಗ್‌ ಚಾಕೊಲೆಟ್‌ ತುಂಬಿರುವ 300 ಸ್ಯಾಚೆಟ್‌ಗಳನ್ನು ಮತ್ತು 592 ಬಿಡಿ ಚಾಕಲೆಟ್‌ಗಳು ಸೇರಿದಂತೆ ಒಟ್ಟು 12,592 ಬಾಂಗ್‌ ಚಾಕಲೆಟ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದರು.
ಇನ್ನು ಅದೇ ದಿನ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯ ಅಧಿಕಾರಿ, ಸಿಬಂದಿಯವರು ಕಾರ್ಯಾಚರಣೆ ನಡೆಸಿ ನಗರದ ಹೈಲ್ಯಾಂಡ್‌ ಬಳಿ ಗೂಡಂಗಡಿಯಲ್ಲಿ ಬಾಂಗ್‌ ಮಿಶ್ರಿತ ಚಾಕಲೆಟ್‌ನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೆಚನ್‌ ಎಂಬಾತನ ವಶದಿಂದ 5,500 ರೂ. ಮೌಲ್ಯದ ಬಾಂಗ್‌ ಚಾಕಲೆಟ್‌ಗಳನ್ನು ಸ್ವಾಧೀನಪಡಿಸಿ ಕೊಂಡಿದ್ದರು.

ಚಾಕಲೆಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದ್ದು, ಅದರಲ್ಲಿ ಗಾಂಜಾ ಅಂಶವಿರುವುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ. ಆರೋಪಿತರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಲಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

LEAVE A REPLY

Please enter your comment!
Please enter your name here