ಮಂಗಳೂರು: ಕೇಂದ್ರ ಸರ್ಕಾರದ ಉದ್ದೇಶಿತ ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಪಿಣರಾಯಿ ನೇತ್ರತ್ವದ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಈ ಮೂಲಕ ಯುಸಿಸಿ ವಿರುದ್ಧ ನಿರ್ಣಯ ಅಂಗೀಕರಿಸಿದ ದೇಶದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಮತ್ತು ಆತುರದಿಂದ ಯುಸಿಸಿ ಜಾರಿಗೆ ತರಲು ಹೊರಟಿದ್ದು, ಇದು ಸಂವಿಧಾನದ ಜಾತ್ಯತೀತತೆಯನ್ನು ಇಲ್ಲದಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ವಿಧಾನ ಸಭೆಯ ಪ್ರಮುಖ ಒಕ್ಕೂಟವಾದ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನಿರ್ಣಯಕ್ಕೆ ಬೆಂಬಲಿಸಿವೆ.
ಪ್ರಸ್ತಾವಿತ ಮಸೂದೆಯು ಕೇರಳ ಸೇರಿದಂತೆ ಜನಸಮುದಾಯದ ವಿವಿಧ ವರ್ಗಗಳಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ನಿರ್ಣಯವು ಹೇಳಿದೆ. ಅಲ್ಲದೆ, ಕೇಂದ್ರ ಸರ್ಕಾರವು ಒಮ್ಮತವನ್ನು ಬಯಸದೆ ಅಥವಾ ಸೈದ್ಧಾಂತಿಕ ಚರ್ಚೆಯಲ್ಲಿ ತೊಡಗದೆ ಏಕಪಕ್ಷೀಯ ನಿರ್ಧಾರದೊಂದಿಗೆ ಮುಂದುವರಿಯುತ್ತಿದೆ ಎಂದು ನಿರ್ಣಯ ಆರೋಪಿಸಿದೆ.
ಏಕರೂಪ ನಾಗರಿಕ ಸಂಹಿತೆಯು ಜನರ ಐಕ್ಯತೆಗೆ ಧಕ್ಕೆ ತರುವ ಮತ್ತು ರಾಷ್ಟ್ರದ ಒಗ್ಗಟ್ಟಿಗೆ ಹಾನಿಕಾರಕವಾದ ವಿಭಜಕ ಕ್ರಮವಾಗಿದೆ. ಇದು ದೇಶದ ಸಂಪೂರ್ಣ ಜನತೆಯ ಮೇಲೆ ಪರಿಣಾಮ ಬೀರಲಿದೆ ಎಂದು ನಿರ್ಣಯವು ಹೇಳಿದ್ದು, ಸಮಸ್ಯೆ ಉಂಟು ಮಾಡುವ ಇಂತಹ ಕ್ರಮಗಳನ್ನು ತೆಗೆದುಕೊಳ್ಳದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬಿಜೆಪಿ ತನ್ನ “ಚುನಾವಣಾ ಅಜೆಂಡಾ” ದ ಭಾಗವಾಗಿ ಯುಸಿಸಿ ವಿಷಯವನ್ನು ಪ್ರಸ್ತಾಪಿಸುತ್ತಿದೆ ಎಂದು ಸಿಎಂ ಪಿಣರಾಯಿ ಇತ್ತೀಚೆಗೆ ಆರೋಪಿಸಿದ್ದರು. ಪ್ರಸ್ತಾವನೆಯನ್ನು ಏಕಪಕ್ಷೀಯವಾಗಿ ಮುಂದುವರಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅಳಿಸಿಹಾಕುವ ಮತ್ತು “ಒಂದು ರಾಷ್ಟ್ರ, ಒಂದು ಸಂಸ್ಕೃತಿ” ಎಂಬ ಕೋಮು ಅಜೆಂಡಾವನ್ನು ಭಾರತದಲ್ಲಿ ಹೇರುವ ಪ್ರಯತ್ನಗಳ ಭಾಗವಾಗಿದೆ ಎಂದು ಅವರು ಹೇಳಿದ್ದರು.