ಪಿಎಸ್ಐ ಎಂದು ನಂಬಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಆರೋಪಿ ಬಂಧನ

ಮಂಗಳೂರು: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಖಾಸಗಿ ಫೋಟೋವನ್ನು ವೈರಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಮೂಲದ ಯಮನೂರ ಬಂಧಿತ ಆರೋಪಿ.

ಸಂತ್ರಸ್ತ ಯುವತಿಗೆ ಯಮನೂರ ಇನ್ ಸ್ಟಾಗ್ರಾಂ ಮುಖಾಂತರ ಪರಿಚಯವಾಗಿದ್ದಾನೆ. ಆತ ತಾನು ವಾಮಂಜೂರು ಸ್ಟೇಷನ್ ನಲ್ಲಿ ಪಿಎಸ್‌ಐ ಎಂದು ಆಕೆಯನ್ನು ನಂಬಿಸಿದ್ದಾನೆ. ಬಳಿಕ ಯುವತಿಯ ಮನೆಯವರಿಗೆ ಕೆಲಸ ಕೊಡಿಸುವುದಾಗಿ ಅವರ ದಾಖಲಾತಿಗಳನ್ನು ಪಡೆದುಕೊಂಡಿದ್ದಾನೆ. 2023 ಮೇಯಲ್ಲಿ ಆಕೆಯನ್ನು ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿದ್ದಾನೆ. ಬಳಿಕ ಅದೇ ವಾರ ತಣ್ಣೀರುಬಾವಿ ಬೀಚ್ ಗೆ ಕರೆದೊಯ್ದು ಅಲ್ಲಿ ಆಕೆಯೊಂದಿಗೆ ಫೋಟೋ ತೆಗೆದಿದ್ದಾನೆ. ಬಳಿಕ ಆ ಫೋಟೋವನ್ನು ವೈರಲ್ ಮಾಡುವುದಾಗಿ ಹೆದರಿಸಿ ಸಂತ್ರಸ್ತ ಯುವತಿಯನ್ನು ಬೆಂಗಳೂರಿಗೆ ಕರೆಯಿಸಿದ್ದಾನೆ. ಅಲ್ಲಿ ರಾತ್ರಿ ನೆಲಮಂಗಲದ ಲಾಡ್ಜ್ ಗೆ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಮುಲ್ಕಿಯ ಕಿನ್ನಿಗೋಳಿಯ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಸಂತ್ರಸ್ತೆಯ ನಗ್ನ ಫೋಟೋಗಳನ್ನು ಆಕೆಯ ಮನೆಯವರು, ಸ್ನೇಹಿತರ ಮೊಬೈಲ್ ಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಬಳಿಕ ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾದರೆ 1,50,000 ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯಮನೂರನನ್ನು ಪೊಲೀಸರು ಮಂಗಳೂರಿನಲ್ಲಿ ದಸ್ತಗಿರಿ ಮಾಡಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here