ಮಂಗಳೂರು (ಹೊಸದಿಲ್ಲಿ): ಈ ವರ್ಷ ನಡೆಯಲಿರುವ ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಧಾನಸಭಾ ಚುನಾವಣೆಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಅ.17ರಂದು ಘೋಷಿಸಿದೆ. ಚುನಾವಣಾ ಆಯೋಗ ಚುನಾವಣೆ ದಿನಾಂಕಗಳನ್ನು ಘೋಷಿಸುವ ಮುನ್ನವೇ ಪಕ್ಷ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿರುವುದು ಇದೇ ಮೊದಲು.
ಛತ್ತೀಸಗಢದ ಒಟ್ಟು 90 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷ ಬಿಡುಗಡೆಗೊಳಿಸಿದ್ದು, ಮಧ್ಯ ಪ್ರದೇಶದ ಒಟ್ಟು 230 ವಿಧಾನಸಭಾ ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿರುವ ಹಿಂದೆ ಬಿಜೆಪಿಗೆ ತನ್ನದೇ ಆದ ಕಾರಣವಿದೆ ಎಂದು ಹೇಳಲಾಗಿದೆ. ಪಕ್ಷದಲ್ಲಿ ಅಸಮಾಧಾನವಿದ್ದರೆ ಅವುಗಳು ಬೇಗನೇ ತಿಳಿದು ಅವುಗಳನ್ನು ಪರಿಹರಿಸಬಹುದು ಎಂಬುದು ಬಿಜೆಪಿಯ ಆಶಯವಾಗಿದೆ ಎಂದು ವರದಿಯಾಗಿದೆ.