ಮಂಗಳೂರು(ಕೊಚ್ಚಿನ್):ಕೊಚ್ಚಿನ್ ನ ಜನಪ್ರಿಯ ಲುಲೂ ಮಾಲ್ನಲ್ಲಿ ಮಹಿಳೆಯಂತೆ ಬುರ್ಖಾ ಧರಿಸಿ ಮಹಿಳೆಯರ ವಾಶ್ರೂಮ್ಗೆ ತೆರಳಿ ಕ್ಯಾಮೆರಾ ಇರಿಸಿದ ಆರೋಪಿಯನ್ನು ಕೇರಳದ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಭಿಮನ್ಯು(23 ವ) ಐಟಿ ಉದ್ಯೋಗಿಯಾಗಿದ್ದು, ಮೊಬೈಲ್ ಫೋನ್ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ಈತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಇ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನ್ನ ಫೋನ್ನ್ನು ಸಣ್ಣ ರಟ್ಟಿನ ಬಾಕ್ಸ್ನಲ್ಲಿ ಇರಿಸಿ, ದೃಶ್ಯಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾ ಬಳಿ ರಂಧ್ರ ಮಾಡಿ ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದ. ಬಳಿಕ ಆತ ಬಾಗಿಲಿನ ಮುಂದೆ ನಿಂತಿದ್ದ. ಆತನ ಚಲನ ವಲನವನ್ನು ಗಮನಿಸಿದ ಮಾಲ್ನ ಭದ್ರತಾ ಸಿಬ್ಬಂದಿ ವಿಚಾರಿಸಿದಾಗ ರಟ್ಟಿನ ಪೆಟ್ಟಿಗೆಯಲ್ಲಿದ್ದ ಗುಟ್ಟು ರಟ್ಟಾಗಿದೆ. ಮೊಬೈಲ್ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.