ಮಂಗಳೂರು(ಪಾಟ್ನಾ): ಮಗಳ ಅಂತ್ಯಸಂಸ್ಕಾರ ಮುಗಿಸಿ ಬಂದ ತಂದೆಗೆ ಸ್ವತಃ ಮಗಳೇ ಕರೆ ಮಾಡಿ ತಾನು ಬದುಕಿರುವ ಬಗ್ಗೆ ತಿಳಿಸಿದ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ಅಂಶು ಕುಮಾರಿ ಎಂಬ ಹುಡುಗಿಯು ನಾಪತ್ತೆಯಾಗಿದ್ದಳು. ಅಕ್ಬರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಕೆಲವು ದಿನಗಳ ಹಿಂದೆ ಕಾಲುವೆಯೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮುಖವು ಗುರುತಿಸಲಾಗದಷ್ಟು ಉಬ್ಬಿಕೊಂಡಿತ್ತು. ಅದು ಕಾಣೆಯಾದ ಅಂಶು ಕುಮಾರಿಯದ್ದೇ ದೇಹ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು.
ಅಂತ್ಯಸಂಸ್ಕಾರ ನಡೆದ ವಿಷಯ ನಾಪತ್ತೆಯಾಗಿದ್ದ ಬಾಲಕಿಯ ಗಮನಕ್ಕೆ ಬಂದಿದ್ದು, ತಕ್ಷಣವೇ ಆಕೆ ತಂದೆಗೆ ವಿಡಿಯೋ ಕರೆ ಮಾಡಿ, ʼತಾನಿನ್ನೂ ಬದುಕಿದ್ದೇನೆʼ ಎಂದು ಅಳುತ್ತಾ ತಿಳಿಸಿದ್ದಾಳೆ. ಅಂಶು ತನ್ನ ಪ್ರಿಯಕರನೊಂದಿಗೆ ಊರು ಬಿಟ್ಟಿದ್ದು, ಆತನನ್ನು ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿಯೂ, ಈಗ ಅತ್ತೆ ಜೊತೆ ಸುಖವಾಗಿದ್ದಾಳೆಂದು ತಂದೆಗೆ ತಿಳಿಸಿ, ಕುಟುಂಬ ದುಃಖಪಡದಂತೆ ತಿಳಿಸಿದ್ದಾಳೆ.