ಮಂಗಳೂರು(ಮಾಸ್ಕೋ): ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದಿದ್ದ ರಷ್ಯಾದ ಬಾಡಿಗೆ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಬುಧವಾರ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಇನ್ನು 9 ಮಂದಿ ಜೀವ ಕಳೆದುಕೊಂಡಿದ್ದಾರೆ. ಯೆವ್‍ಗಿನಿ ಪ್ರಯಾಣಿಸುತ್ತಿದ್ದ ಎಂಬ್ರೆಯರ್ ಎಕ್ಸಿಕ್ಯೂಟಿವ್ ಜೆಟ್ ಪತನಗೊಂಡಿದೆ ಎಂದು ಇಂಟರ್‍ನ್ಯಾಷನಲ್ ಏವಿಯೇಶನ್ ಎಚ್‍ಕ್ಯೂ ವೆಬ್‍ಸೈಟ್ ಹೇಳಿದೆ. ತಾಂತ್ರಿಕ ವೈಫಲ್ಯದ ಹೊರತಾಗಿ ಸಿಬ್ಬಂದಿಯ ಪ್ರಮಾದದಿಂದ ಕಳೆದ 20 ವರ್ಷಗಳ ಸೇವೆಯಲ್ಲಿ ಸಂಭವಿಸಿದ ಮೊದಲ ದುರಂತ ಇದಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಒಟ್ಟು ಹತ್ತು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನ ಮಾಸ್ಕೋದಿಂದ ಪೀಟರ್ಸ್ ಬರ್ಗ್ ಗೆ ಪ್ರಯಾಣಿಸುತ್ತಿತ್ತು. ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ರಷ್ಯಾ ಬೆಂಬಲಿತ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಪುಟಿನ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಉಕ್ರೇನ್ ಮೇಲಿನ ರಷ್ಯಾ ದಾಳಿಯಲ್ಲಿ ಪ್ರಿಗೊಝಿನ್ ಅವರ ಪಡೆಗಳೇ ಮುಂದಾಳತ್ವ ವಹಿಸಿದ್ದವು. ಯೆವ್ಗೆನಿ ಪ್ರಿಗೋಜಿನ್ ಸಾಕಷ್ಟು ಪ್ರಭಾವ ಹೊಂದಿರುವ ರಷ್ಯಾದ ಶ್ರೀಮಂತ ಉದ್ಯಮಿ, ಮರ್ಸಿನರಿ ಮುಖ್ಯಸ್ಥನಾಗಿದ್ದ.