ಮಂಗಳೂರು(ಶಿಮ್ಲಾ): ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಗುರುವಾರ ಭಾರೀ ಭೂಕುಸಿತ ಉಂಟಾದ ಪರಿಣಾಮ ಹಲವಾರು ಮನೆಗಳು ಕುಸಿದುಬಿದ್ದಿದ್ದು, ಅನೇಕ ಜನರು ಸಿಲುಕಿರುವ ಶಂಕೆ ಇದೆ. ಕುಲು ಜಿಲ್ಲೆಯ ಅನ್ನಿ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಸುಮಾರು 8-9 ಬಹುಮಹಡಿ ಕಟ್ಟಡಗಳು ಭೂಕುಸಿತದಿಂದ ಏಕಾಏಕಿ ಕುಸಿದುಬಿದ್ದು ಭಾರೀ ಧೂಳು ಮೇಲೆದ್ದಿರುವ ದೃಶ್ಯವು ವೀಡಿಯೊದಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ. ಕಳೆದ ಒಂದು ವಾರದ ಹಿಂದೆಯೇ ಕಟ್ಟಡ ತೆರವು ಮಾಡುವಂತೆ ಆಡಳಿತ ಮಂಡಳಿ ನೋಟಿಸ್ ನೀಡಿತ್ತು ಎಂದು ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಇಂದಿನಿಂದ ಮುಂದಿನ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ಇಂದು ಹಾನಿಗೊಳಗಾದ ಕುಲು-ಮಂಡಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿವೆ. ಕುಲು ಮತ್ತು ಮಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ಪಾಂಡೋ ಮೂಲಕ ಪರ್ಯಾಯ ಮಾರ್ಗವೂ ಹಾಳಾಗಿದೆ. ಹೀಗಾಗಿ ಸದ್ಯಕ್ಕೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕುಲು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಸಾಕ್ಷಿ ವರ್ಮಾ ತಿಳಿಸಿದ್ದಾರೆ. ನಿರಂತರ ಮಳೆ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 400ಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಭಂದಿಸಲಾಗಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಶಿಮ್ಲಾ ಸೇರಿದಂತೆ 6 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
VIDEO | Several buildings collapsed in Himachal Pradesh’s Kullu due to rain-triggered landslides in the district. More details are awaited.
(Source: Third Party) pic.twitter.com/hxDbYgzoQJ
— Press Trust of India (@PTI_News) August 24, 2023