ಮಂಗಳೂರು(ನವದೆಹಲಿ): ಹಣದುಬ್ಬರ ಹಾಗೂ ನಿರುದ್ಯೋಗ ಹೆಚ್ಚಳದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜನರು ಅಸಂತುಷ್ಟರಾಗಿದ್ದಾರೆ. ಆದರೂ 2024ರ ಚುನಾವಣೆಯಲ್ಲಿ ಅವರೇ ಗೆಲುವು ಸಾಧಿಸಲಿದ್ದಾರೆ ಎಂದು ‘ಇಂಡಿಯಾ ಟುಡೆ’ಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚಳವಾಗಿದ್ದು, 26 ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಉತ್ತಮ ಸಾಧನೆ ಮಾಡಲಿದೆ ಎಂದು ಹೇಳಿದೆ.
ಮುಂದಿನ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸುವರ ಪೈಕಿ ಶೇ 52 ಮಂದಿ ನರೇಂದ್ರ ಮೋದಿ ಎಂದು ಉತ್ತರಿಸಿದರೆ, ಶೇ 16 ಮಂದಿ ರಾಹುಲ್ ಗಾಂಧಿ ಅವರ ಪರ ಒಲವು ತೋರಿಸಿದ್ದಾರೆ. ಈಗ ಚುನಾವಣೆ ನಡೆದರೆ 542 ಸ್ಥಾನಗಳ ಪೈಕಿ ಬಿಜೆಪಿ 287 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವುದು ಸಮೀಕ್ಷೆಯ ಸಾರಾಂಶ. ಜನವರಿಯಲ್ಲಿ ನಡೆಸಲಾದ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಸಿದಿದೆ. ಮೋದಿ ಕಾರ್ಯವೈಖರಿ ಸಮಾಧಾನ ತಂದಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ 1.6 ಲಕ್ಷ ಮಂದಿ (ಶೇ 59) ಹೇಳಿದ್ದಾರೆ. ಜನವರಿಯಲ್ಲಿ ಇದು ಶೇ 67ರಷ್ಟಿತ್ತು.
ಶೇ 63ರಷ್ಟು ಮಂದಿ ಮೋದಿಯವರ ಕಾರ್ಯವೈಖರಿ ‘ಉತ್ತಮ’ವಾಗಿದೆ ಎಂದು ಹೇಳಿದ್ದಾರೆ. ಜನವರಿ ತಿಂಗಳಲ್ಲಿ ಹೀಗೆ ಹೇಳಿದವರ ಪ್ರಮಾಣ ಶೇ 72ರಷ್ಟಿತ್ತು. ಜನವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿಯವರ ಕಾರ್ಯವೈಖರಿ ‘ಕಳಪೆ’ ಎಂದು ಶೇ 16 ಮಂದಿ ಹೇಳಿದ್ದರು. ಈಗ ಅವರ ಪ್ರಮಾಣ ಶೇ 22ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವರ್ಚಸ್ಸು ಏರಿಕೆಯಾಗಿದೆ ಎಂದಿರುವ ಸಮೀಕ್ಷೆಯು, ಕಳೆದ ನಾಲ್ಕು ವರ್ಷಗಳಲ್ಲಿ ಅವರು ಹೆಚ್ಚಿನ ಅನುಮೋದನೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಪುನಶ್ಚೇತನಕ್ಕೆ ಅವರೇ ಸೂಕ್ತ ವ್ಯಕ್ತಿ ಎಂದು ಶೇ 32 ಮಂದಿ ಅಭಿಪ್ರಾಯಪಟ್ಟಿದ್ದಾರೆ.ವಿರೋಧ ಪಕ್ಷಗಳ ನಾಯಕರ ಪೈಕಿ ಮುಂದಿನ ಪ್ರಧಾನಮಂತ್ರಿಯಾಗಲು ರಾಹುಲ್ ಗಾಂಧಿಯೇ ಸೂಕ್ತ ವ್ಯಕ್ತಿ ಎಂದು ಶೇ 24 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನವರಿಯಲ್ಲಿ ಇದರ ಶೇಕಡವಾರು 13ರ ರಷ್ಟಿತ್ತು. 2019ರಲ್ಲಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಭಾರತ್ ಜೋಡೊ ಯಾತ್ರೆ ಬಳಿಕ ಅವರ ವರ್ಚಸ್ಸು ಏರಿಕೆಯಾಗಿದೆ.