ಮಂಗಳೂರು (ಬೆಂಗಳೂರು): ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯದ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದೇವೆ’ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದರೆ ತಮಿಳುನಾಡಿಗೆ ನೀರು ಹರಿಸುವ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮೇಕೆದಾಟು ಜಲಾಶಯ ನಿರ್ಮಾಣವಾಗಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ’ ಎಂದರು.’ಮೇಕೆದಾಟು ಜಲಾಶಯ ನಿರ್ಮಾಣವಾದರೆ ಅದರಲ್ಲಿ ಸಂಗ್ರಹಿಸುವ ನೀರನ್ನು ನಾವು ಕುಡಿಯುವ ನೀರು ಪೂರೈಕೆ ಉದ್ದೇಶಕ್ಕೆ ಮಾತ್ರ ಬಳಸಬಹುದು. ಉಳಿದಂತೆ ಅಗತ್ಯ ಸಂದರ್ಭಗಳಲ್ಲಿ ತಮಿಳುನಾಡಿಗೆ ನೀರು ಹರಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು.ತಮಿಳುನಾಡು ತನ್ನ ಪಾಲಿನ ನೀರನ್ನು ಯಾವ ಉದ್ದೇಶಕ್ಕೆ ಬೇಕಿದ್ದರೂ ಬಳಸಬಹುದು. ಅದನ್ನು ತಡೆಯಲು ಅಧಿಕಾರವಿಲ್ಲ. ಈಗ ತಮಿಳುನಾಡಿಗೆ ನೀರು ಹರಿಸುವುದಕ್ಕೆ ರಾಜ್ಯದಲ್ಲಿ ಕೆಲವರ ವಿರೋಧವಿದೆ. ಆದರೆ, ನ್ಯಾಯಾಲಯದ ಆದೇಶ ಪಾಲಿಸುವುದು ಅನಿವಾರ್ಯ ಎಂದರು