ಮಂಗಳೂರು(ಕಾರವಾರ): ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ದೊಡ್ಡ ಗಾತ್ರದ ಬಂಗುಡೆ ಮೀನೊಂದು ಬೈತಖೋಲ್ ಮೀನುಗಾರರ ಬಲೆಗೆ ಬಿದ್ದಿದೆ. 19 ಇಂಚು ಉದ್ದ ಮತ್ತು 4.5 ಇಂಚು ಅಗಲದ ಈ ಬಂಗುಡೆ ಮೀನು ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಇಷ್ಟು ದೊಡ್ಡ ಗಾತ್ರದ ಬಂಗುಡೆ ಕರಾವಳಿಯಲ್ಲಿ ಪತ್ತೆಯಾಗಿರುವ ಮಾಹಿತಿಯೇ ಇದುವರಿಗೆ ಲಭ್ಯವಾಗಿಲ್ಲ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕಡಲ ವಿಜ್ಞಾನ ವಿಭಾಗ ತಿಳಿಸಿದೆ. ಬೀಡು ಬಲೆ ಮೀನುಗಾರಿಕೆಗೆ ತೆರಳಿದ್ದ ಆನಂದ ಹರಿಕಂತ್ರ ಎಂಬವರ ಬಲೆಗೆ ಬಿದ್ದ ಭಾರೀ ಗಾತ್ರದ ಈ ಮೀನನ್ನು ನವೀನ ಹರಿಕಂತ್ರ ಖರೀದಿಸಿ, ಮೀನುಗಾರರ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ. ದೊಡ್ಡ ಗಾತ್ರದ ಬಂಗುಡೆಯನ್ನು ಸಾರ್ವಜನಿಕರ ವೀಕ್ಷಣೆಗಾಗಿ ಕಾರವಾರ ಕಡಲ ವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ವಿನಾಯಕ ತಿಳಿಸಿದ್ದಾರೆ.