ಬಾಯ್‌ಫ್ರೆಂಡ್‌ಗಾಗಿ ಪಾಕ್‌ಗೆ ತೆರಳಿದ ಅಫ್ರಿನ್‌ ಶೇಖ್ ಗೆ ಉಗ್ರರ ನಂಟುವ – ಇ-ಮೇಲ್‌ ನಲ್ಲಿ ಸ್ಫೋಟಕ ಮಾಹಿತಿ ಬಯಲು‌ – ತನಿಖೆಗೆ ಮುಂದಾದ ಮುಂಬೈ ಪೊಲೀಸ್

ಮಂಗಳೂರು(ಮುಂಬೈ): ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬರು ಬಾಯ್‌ಫ್ರೆಂಡ್‌ಗಾಗಿ ಪಾಕಿಸ್ತಾನಕ್ಕೆ ತೆರಳಿರದ ಪ್ರಕರಣ ಬೆಳಕಿಗೆ ಬರುತ್ತಿರುವಂತೆ ಆ ಮಹಿಳೆಗೆ ಉಗ್ರರ ಜತೆ ನಂಟಿರುವ ಶಂಕೆ ವ್ಯಕ್ತವಾಗಿದೆ.

ಮಹಾರಾಷ್ಟ್ರದ ಸಂಭಾಜಿ ನಗರ ನಿವಾಸಿಯಾದ ಅಫ್ರಿನ್‌ ಶೇಖ್‌ (32) ವಿವಾಹಿತ ಮಹಿಳೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಅಫ್ರಿನ್‌ ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದು, ಆಕೆಗೆ ಉಗ್ರರ ಜತೆ ನಂಟು ಹೊಂದಿರುವ ಬಗ್ಗೆ  ಮಹಾರಾಷ್ಟ್ರ ಪೊಲೀಸರಿಗೆ ಅನಾಮಧೇಯ ಹೆಸರಿನಲ್ಲಿ ಇ-ಮೇಲ್‌ ಬಂದಿದ್ದು, ಮುಂಬೈ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಅಫ್ರಿನ್‌ ಶೇಖ್‌ ದುಬೈಗೆ ತೆರಳಿದ್ದು ವಾಪಸ್‌ ಬಾರದ ಹಿನ್ನೆಲೆಯಲ್ಲಿ ಪತಿ‌ ಮತೀನ್ ಚೌದರಿ ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ಅಫ್ರಿನ್‌ ಶೇಖ್‌ ದುಬೈನಿಂದ ಪಾಕಿಸ್ತಾನಕ್ಕೆ ತೆರಳಿ ಬಾಯ್‌ಫ್ರೆಂಡ್‌ನನ್ನು ಮದುವೆಯಾಗಿ ನಂತರ ಲಿಬಿಯಾಗೆ ತೆರಳಿರುವುದಾಗಿಯೂ, ಅಲ್ಲಿ ಆಕೆಗೆ ಉಗ್ರ ಸಂಘಟನೆಯೊಂದು ತರಬೇತಿ ನೀಡುತ್ತಿರುವುದಾಗಿಯೂ  ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಉಗ್ರ ನಿಗ್ರಹ ದಳ, ಪೊಲೀಸರು, ಗುಪ್ತಚರ ಇಲಾಖೆ ಅಧಿಕಾರಿಗಳು ಮಹಿಳೆಯ ಪ್ರವಾಸ, ಆಕೆ ಉಗ್ರರ ಜತೆ ಹೊಂದಿರುವ ನಂಟಿನ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಸಿಕ್‌ ಜಿಲ್ಲೆಯ ಮಹಿಳೆಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಪತಿ ಮತೀನ್‌ ಚೌಧರಿಯು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here