ಮಂಗಳೂರು(ಮಾಸ್ಕೊ): ರಷ್ಯಾದ ಸ್ಕೋವ ನಗರದ ವಿಮಾನ ನಿಲ್ದಾಣಕ್ಕೆ ಬೃಹತ್ ಡ್ರೋನ್ ದಾಳಿ ನಡೆದಿದ್ದು ನಾಲ್ಕು ವಿಮಾನಗಳು ಧ್ವಂಸವಾಗಿದೆ.
ಯುಕ್ರೇನ್ ದಾಳಿ ನಡೆಸಿರುವುದಾಗಿ ರಷ್ಯಾ ಹೇಳಿದ್ದು, ಯುಕ್ರೇನ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಸ್ತೇನಿಯ ಗಡಿಗೆ ತಾಗಿಕೊಂಡಿರುವ, ಯುಕ್ರೇನ್‍ನಿಂದ ಆರುನೂರು ಕಿಲೋ ಮೀಟರ್ ದೂರದಲ್ಲಿರುವ ಸ್ಕೋವ ನಗರದ ವಿಮಾನ ನಿಲ್ದಾಣಕ್ಕೆ ಬುಧವಾರ ಬೆಳ್ಳಂಬೆಳಗ್ಗೆ ಭಾರೀ ಡ್ರೋನ್ ದಾಳಿ ನಡೆದಿದ್ದು ಸೈನಿಕ, ನಾಗರಿಕ ಬಳಕೆಗೆ ಉಪಯೋಗಿಸುವ ವಿಮಾನ ನಾಶವಾಗಿದೆ.
ರಕ್ಷಣಾ ಸಚಿವಾಲಯ ಸಾಮಾಜಿಕ ಮಾಧ್ಯಮಗಳಲ್ಲಿ ಡ್ರೋನ್ ದಾಳಿಯನ್ನು ನಿಷ್ಫಲಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದು ರಾಜ್ಯಪಾಲ ಮಿಖಾಯೇಲ್ ವೆದರ್‍ನಿಕೊವ್ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಸ್ಫೋಟದ ದೊಡ್ಡ ಸದ್ದು ಮತ್ತು ದಟ್ಟ ಹೊಗೆ ವಿಮಾನ ನಿಲ್ದಾಣದಲ್ಲಿ ಹಬ್ಬಿರುವ, ಸೈರನ್ ಮೊಳಗುವ ವೀಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಯುಕ್ರೇನ್ ಡ್ರೋನ್ ಮೂಲಕ ರಷ್ಯಾದ ಮೇಲೆ ದಾಳಿ ನಡೆಸುತ್ತಿದೆ ಎಂದು ಹೇಳಿರುವ ರಷ್ಯಾ, ಕಪ್ಪು ಸಮುದ್ರದಲ್ಲಿ ನಾಲ್ಕು ಯುಕ್ರೇನ್ ಸೈನಿಕ ಬೋಟುಗಳನ್ನು ನಾಶಪಡಿಸಿರುವುದಾಗಿ ಹೇಳಿದೆ.