ಮಂಗಳೂರು(ಬೆಂಗಳೂರು): ವಿಧಾನ ಸಭಾ ಚುನಾವಣಾ ಸೋಲಿನ ಬಳಿಕ ಇದೀಗ ನಿಧಾನಕ್ಕೆ ಮೈಕೊಡವಿ ಎದ್ದು ನಿಂತಿರುವ ರಾಜ್ಯ ಬಿಜೆಪಿ ನಾಯಕರು ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಒಂದೊಂದಾಗಿ ಪ್ರಾರಂಭಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ನಾಳೆಯಿಂದ (ಸೆ.01), 2024ರ ಲೋಕಸಭಾ ಚುನಾವಣೆಗೆ ಮತದಾರರ ಮಹಾ ಅಭಿಯಾನ ಪ್ರಾರಂಭಗೊಳ್ಳಲಿದೆ.ಈ ಅಭಿಯಾನಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆ ಬಿಜೆಪಿ ಕಚೇರಿಯಲ್ಲಿ ಇಂದು (ಆ.31) ನಡೆಯಿತು. ಆದರೆ, ಒಡೆದ ಮನೆಯಂತಾಗಿರುವ ರಾಜ್ಯ ಬಿಜೆಪಿಯಲ್ಲಿ ಇಂದಿನ ಈ ಸಭೆಗೆ ರಾಜ್ಯಾಧ್ಯಕ್ಷರು ಸೇರಿದಂತೆ ಕೆಲವು ಪ್ರಮುಖ ನಾಯಕರೇ ಗೈರಾಗಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ವಿ ಸೋಮಣ್ಣ ಹಾಗೂ ಆರ್. ಅಶೋಕ್ ಅವರಂತಹ ಘಟಾನುಘಟಿ ಕಮಲ ನಾಯಕರೇ ಇಂದು ಪೂರ್ವಭಾವಿ ಸಭೆಗೆ ಗೈರಾಗಿರುವುದು ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇವರಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣ ಗೈರಾಗಿದ್ದರೆ, ಮಾಜಿ ಸಿಎಂ ಬಿ.ಎಸ್.ವೈ ಶಿವಮೊಗ್ಗ ವಿಮಾನ ಹಾರಾಟ ಕಾರ್ಯಕ್ರಮದ ಕಾರಣ ಗೈರಾಗಿದ್ದರು, ಇನ್ನು ಬೊಮ್ಮಾಯಿ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಆಗಿರುವ ಕಾರಣ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಆದರೆ, ವಿಶೇಷವೆಂದರೆ ಮಾಜಿ ಸಚಿವರಾದ ವಿ ಸೋಮಣ್ಣ ಮತ್ತು ಆರ್ ಅಶೋಕ್ ಯಾವುದೇ ಕಾರಣ ನೀಡದೆ ಗೈರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.