ದೇಶದ ಹೆಸರು ಬದಲಾಯಿಸಲು ಹೊರಟ ಕೇಂದ್ರ ಸರಕಾರ – ಜಿ20 ಶೃಂಗಸಭೆಯ ಲೆಟರ್ ಹೆಡ್‌ನಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖ – ಕೇಂದ್ರದ ನಡೆಗೆ ಜೈರಾಮ್ ರಮೇಶ್ ಕಿಡಿ

ಮಂಗಳೂರು(ದೆಹಲಿ): ಇಂಡಿಯಾ ಬದಲು ಭಾರತ್ ಎಂದು ಹೆಸರಿಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಯೂ ನಡೆದಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಹೆಸರನ್ನು ಬದಲಾಯಿಸಲು ಹೊರಟಿದೆಯೇ ಎಂಬ ಗುಮಾನಿ ಬಲವಾಗಿದೆ.

ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಔತಣಕೂಟದ ಲೆಟರ್ ಹೆಡ್‌ನಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಾಗಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಮುದ್ರಿಸಿರುವುದೇ ಈ ಗುಮಾನಿಗೆ ಕಾರಣ. ಸುದ್ದಿ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿ, ಕೇಂದ್ರದ ನಡೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾವನ್ನು ಇನ್ನು ಮುಂದೆ ಭಾರತ್ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತವೆಂದರೆ ಹಿಂದೂರಾಷ್ಟ್ರ, ಇಂಡಿಯಾ ಎಂದು ಕರೆಯಬೇಡಿ, ಭಾರತೀಯರೆಲ್ಲರೂ ಹಿಂದೂಗಳೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೆಲದಿನಗಳ ಹಿಂದೆ  ನೀಡಿದ ಹೇಳಿಕೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಅಸ್ಸಾಂ ಮುಖ್ಯಮಂತ್ರಿ ‘ರಿಪಬ್ಲಿಕ್ ಆಫ್ ಭಾರತ್’ ಎಂದು ಟ್ವೀಟ್ ಮಾಡಿದ್ದು, ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದು ಹೆಸರು ಬದಲಾವಣೆಗೆ ಪುಷ್ಠಿ ನೀಡಿದೆ.

LEAVE A REPLY

Please enter your comment!
Please enter your name here