ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಹನ್ನೊಂದು ನಗರ ಸ್ಥಳೀಯ ಸಂಸ್ಥೆಗಳ 207 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮ ಮಂಗಳೂರಿನ ಅಂಬೇಡ್ಕರ್ ವೇದಿಕೆಯಲ್ಲಿ ಸೆ.6ರಂದು ನಡೆದಿದ್ದು, ಪೌರಾಡಳಿತ ಸಚಿವರಾದ ರಹೀಂಖಾನ್ ಅವರು ಪೌರಕಾರ್ಮಿಕರಿಗೆ ಸಾಂಕೇತಿಕ ನೇಮಕಾತಿ ಪತ್ರ ವಿತರಿಸಿದರು. ಪುತ್ತೂರಿಗೆ ಸಂಬಂಧಿಸಿ ಶಾಸಕ ಅಶೋಕ್ ಕುಮಾರ್ ರೈ ಅವರು ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಪೌರಾಡಳಿತ ನಿರ್ದೇಶಕಿ ಎನ್.ಮಂಜುಶ್ರೀ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಗರ ಯೋಜನಾ ನಿರ್ದೇಶಕ ಅಭಿಷೇಕ್, ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ ಗೌಡ, ಕರಾವಳಿ ವಿಭಾಗ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು, ಮಧ್ಯ ಕರ್ನಾಟಕದ ಸಂಚಾಲಕ ನವೀನ್, ಮೈಸೂರು ವಿಭಾಗ ಸಂಚಾಲಕ ಧರ್ಮರಾಜ್, ಬೆಂಗಳೂರು ವಿಭಾಗ ಸಂಚಾಲಕ ಪುಟ್ಟಸ್ವಾಮಿ ಕನಕಪುರ, ದೊಡ್ಡಬಳ್ಳಾಪುರದ ಸುರೇಶ್, ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಚನ್ನಕೇಶವ ಕೃಷ್ಣ ಪೂಜಾರಿ, ಜಗದೀಶ ಸೇರಿದಂತೆ ವಿವಿಧ ಜಿಲ್ಲೆಗಳ ಸಂಘದ ಮುಖಂಡರು ಉಪಸ್ಥಿತರಿದ್ದರು.
ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಸಚಿವ ರಹೀಂಖಾನ್, ಶೇ.80ರಷ್ಟು ಪೌರಕಾರ್ಮಿಕರು ಖಾಯಂಗೊಳ್ಳುತ್ತಿದ್ದು ಇನ್ನುಳಿದ ಹೊರಗುತ್ತಿಗೆ ವಾಹನ ಚಾಲಕರು ನೀರುಗಂಟಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಂದಿನ ಡಿಸೆಂಬರ್‌ನೊಳಗೆ ಎಲ್ಲ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲಾಗುವುದು. ಇದಕ್ಕಾಗಿ ಅಗತ್ಯ ಅಂಕಿಅಂಶಗಳನ್ನು ಕ್ರೋಢೀಕರಿಸಲಾಗುತ್ತಿದೆ ಎಂದರು.