ಮಂಗಳೂರು: ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲಾದ್ಯಂತ ಮೊಂತಿ ಹಬ್ಬವನ್ನು ಕ್ರೈಸ್ತರು ಇಂದು ಆಚರಿಸುತ್ತಿದ್ದಾರೆ.
ತೆನೆ ಹಬ್ಬದ ಪ್ರಯುಕ್ತ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ, ಹೊಸ ತೆನೆಯ ಆಶೀರ್ವಚನ, ವಿತರಣೆ, ಮೆರವಣಿಗೆ, ಪುಷ್ಪಾರ್ಚನೆಯ ಮೂಲಕ ಮೇರಿ ಮಾತೆಗೆ ನಮನ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಹಬ್ಬದ ಭೋಜನವನ್ನು ಮಾಡಲಾಗುತ್ತದೆ. ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್ ಗಳಲ್ಲಿ 9 ದಿನಗಳ ನವೇನಾ ಪ್ರಾರ್ಥನೆ ನಡೆದಿದೆ. ಸೆ.8ರ ಶುಕ್ರವಾರ ಬೆಳಗ್ಗೆ ಚರ್ಚ್ ಗಳಲ್ಲಿ ನಡೆದ ಬಲಿ ಪೂಜೆಯ ಬಳಿಕ ಭತ್ತದ ತೆನೆಯನ್ನು ವಿತರಿಸಲಾಯಿತು. ಕರಾವಳಿ ಕ್ರೈಸ್ತರ ಮನೆಗಳಲ್ಲಿ ಮೊಂತಿ ಹಬ್ಬದ ವಿಶೇಷವಾಗಿ ಕರಾವಳಿಯ ಕ್ರೈಸ್ತರ ಮನೆಗಳಲ್ಲಿ ಸ್ಥಳೀಯವಾಗಿ ಬೆಳೆಯುವ ತರಕಾರಿಯ ಪಲ್ಯ, ಸಾರು, ಪಾಯಸದಿಂದ ಕೂಡಿದ ಸಸ್ಯಾಹಾರಿ ಭೋಜನವನ್ನು ಮಾಡಲಾಗುತ್ತದೆ. ಮಂಗಳೂರಿನ ರೊಸಾರಿಯೊ ಚರ್ಚ್, ಬೋಂದೆಲ್ ಚರ್ಚ್, ಉರ್ವಾ ಚರ್ಚ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್ ಗಳಲ್ಲಿ ಬೆಳಗ್ಗೆ ವಿಶೇಷ ಬಲಿಪೂಜೆ ನೆರವೇರಿತು.