ಗಗನಸಖಿ ರೂಪಾಲ್ ಕೊಲೆ ಆರೋಪಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ

ಮಂಗಳೂರು(ಮುಂಬೈ): ಇತ್ತೀಚೆಗೆ ಛತ್ತೀಸ್‌ಗಢದ ರಾಯ್ಪುರ್‌ ಮೂಲದ ಗಗನಸಖಿಯನ್ನು ಮುಂಬೈನಲ್ಲಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿ, ಸ್ವಚ್ಚತಾ ಕೆಲಸಗಾರ 40 ವರ್ಷದ ವಿಕ್ರಮ್ ಅತ್ವಾಲ್ ಪೊಲೀಸ್ ವಶದಲ್ಲಿದ್ದಾಗಲೇ ಸೆ.8ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರು ಪೊಲೀಸ್ ವಶಕ್ಕೆ ಒಪ್ಪಿಸಿದ್ದ ನಂತರ ಪೋವಾಯಿ ಪೊಲೀಸ್ ಠಾಣೆಯ ಶೌಚಾಲಯಕ್ಕೆ ತೆರಳಿದ್ದ. ಅಲ್ಲಿ ಆತ ತನ್ನದೇ ಬಟ್ಟೆಯಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಮರೋಳ್‌ನ ತುಂಗಾ ನಗರದಲ್ಲಿ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಮುಂಬೈನ ಅಂದೇರಿಯ ಟಾಟಾ ಶಕ್ತಿ ಕೇಂದ್ರದ ಮರೋಳ್‌ನ ಎನ್‌ಜಿ ಕಾಂಪ್ಲೆಕ್ಸ್‌ನಲ್ಲಿ ಸೆ. 4 ಸೋಮವಾರ ರಾತ್ರಿ 24 ವರ್ಷದ ರೂಪಾಲ್ ಓಗ್ರೆ ಎನ್ನುವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಅಪಾರ್ಟ್‌ಮೆಂಟ್ ಶೋಧಿಸಿದ ಸಂದರ್ಭದಲ್ಲಿ ಪತ್ತೆಯಾದ ರೂಪಾಲ್‌ ಅವರ ಕತ್ತು ಸೀಳಲಾಗಿತ್ತು. ಆದರೆ ಅವರು ಉಸಿರಾಡುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದರು.

ಕೊಲೆ ಆರೋಪದ ಮೇಲೆ ರೂಪಾಲ್ ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನ ಸ್ವಚ್ಚತಾ ಕೆಲಸಗಾರ ವಿಕ್ರಮ್ ಅತ್ವಾಲ್ ನನ್ನು ಅಂದೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು ಆದರೆ ರೂಪಾಲ್ ಕೊಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿರಲಿಲ್ಲ. ರೂಪಾಲ್ ಕಳೆದ ಆರು ತಿಂಗಳುಗಳ ಹಿಂದೆಯಷ್ಟೇ ಮುಂಬೈಗೆ ಬಂದು ತನ್ನ ಸಹೋದರಿ ಜೊತೆ ಮರೋಳ್‌ನ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದರು. ಏರ್‌ ಇಂಡಿಯಾ ಗಗನಸಖಿಯಾಗಿ ಇತ್ತೀಚಿಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here