ಮಂಗಳೂರು: ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳೇ ವ್ಯಾಪಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನೆ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರವೇ ವ್ಯಾಪಾರ ಮಾಡಬೇಕು ಈ ನಿಟ್ಟಿನಲ್ಲಿ ನಿಮ್ಮ ಜೊತೆ ನಾನಿದ್ದೇನೆ ಎಂದು ವ್ಯಾಪಾರಿಗಳಿಗೆ ಕಟೀಲ್ ಭರವಸೆ ನೀಡಿದ್ದಾರೆ. ಕಳೆದ ವರ್ಷ ಕರಾವಳಿ ಭಾಗದಲ್ಲಿ ಹಿಂದೂ ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ಮಾಡಬೇಕು. ಅನ್ಯಮತೀಯರಿಗೆ ಅವಕಾಶ ನೀಡಬಾರದು ಎಂಬ ವಿವಾದ ಏರ್ಪಟ್ಟಿತ್ತು. ಕರಾವಳಿ ಭಾಗದ ಹಲವು ಜಾತ್ರೆಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂಬ ಬ್ಯಾನರ್ ಕೂಡ ಅಳವಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ಇದೀಗ ಬಿಜೆಪಿ ಅಧ್ಯಕ್ಷರು ಸಂಘಟನೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ.
ಈ ಹಿಂದೆ ಕರಾವಳಿಯ ಹಲವು ಜಾತ್ರಾ ಮಹೋತ್ಸವಗಳಲ್ಲಿ ಹಿಂದೂ ವ್ಯಾಪರಸ್ಥರಿಗೆ ಮಾತ್ರ ಅವಕಾಶ ಎಂಬ ಬ್ಯಾನರ್ ಅಳವಡಿಸಿದ ವೇಳೆ ‘ಜಾತ್ರಾ’ ವರ್ತಕರ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಈ ಸಂಘಟನೆಯಲ್ಲಿ ಹಿಂದೂ ,ಮುಸ್ಲಿಂ ಕ್ರೈಸ್ತ ವ್ಯಾಪಾರಸ್ಥರು ಒಳಗೊಂಡಿದ್ದರು. ಈ ಸಂಘಟನೆ ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ವರ್ಗದವರಿಗೂ ವ್ಯಾಪಾರಕ್ಕೆ ಅವಕಾಶ ನೀಡಲು ಆಗ್ರಹಿಸಿತ್ತು.