ಇನ್ನು ದೇಶದಾದ್ಯಂತ ಹಲವು ಸೌಲಭ್ಯಗಳಿಗೆ ಏಕೈಕ ಸೂತ್ರ – ಜನನ ಪ್ರಮಾಣಪತ್ರ

ಮಂಗಳೂರು (ಹೊಸದಿಲ್ಲಿ): ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು, ವಿವಾಹ ನೋಂದಣಿ, ಚಾಲನಾ ಲೈಸನ್ಸ್, ಸರ್ಕಾರಿ ನೇಮಕಾತಿ ಹೀಗೆ ಹಲವು ಸೌಲಭ್ಯಗಳನ್ನು ಪಡೆಯಲು ಅ.1ರಿಂದ ದೇಶಾದ್ಯಂತ ಜನ್ಮ ಪ್ರಮಾಣಪತ್ರ ಏಕೈಕ ದಾಖಲೆಯಾಗಲಿದೆ.

ಸರ್ಕಾರಿ ಸೇವೆಗಳನ್ನು ದಕ್ಷವಾಗಿ ಮತ್ತು ಪಾರದರ್ಶಕವಾಗಿ ಒದಗಿಸಲು, ಸಾಮಾಜಿಕ ಪ್ರಯೋಜನ ಮತ್ತು ಡಿಜಿಟಲ್ ನೋಂದಣಿಯನ್ನು ಈ ಹೊಸ ಉಪಕ್ರಮ ಖಾತರಿಪಡಿಸಲಿದೆ ಎಂದು ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ-2003ರ ಅನುಷ್ಠಾನ ದಿನಾಂಕವನ್ನು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.ಹೊಸ ಕಾಯ್ದೆಯು ಭಾರತದ ರಿಜಿಸ್ಟ್ರಾರ್ ಜನರಲ್ ಅವರಿಗೆ ಜನಸಂಖ್ಯಾ ಸಮೀಕ್ಷೆಗಳನ್ನು ಅಧ್ಯಯನ ಮಾಡುವ, ನೋಂದಾಯಿತ ಜನನ ಮತ್ತು ಮರಣದ ರಾಷ್ಟ್ರೀಯ ದತ್ತಾಂಶಗಳನ್ನು ನಿರ್ವಹಿಸುವ ಹಾಗೂ ಇವುಗಳನ್ನು ರಾಜ್ಯಗಳು ನೇಮಿಸುವ ಮುಖ್ಯ ರಿಜಿಸ್ಟ್ರಾರ್ ಮತ್ತು ಸ್ಥಳೀಯ ಹಂತಕ್ಕೆ ಸರ್ಕಾರ ನೇಮಕ ಮಾಡುವ ರಿಜಿಸ್ಟ್ರಾರ್ ಜತೆ ಹಂಚಿಕೊಳ್ಳುವ ಅಧಿಕಾರ ಇರುತ್ತದೆ. ರಾಜ್ಯಮಟ್ಟದಲ್ಲೂ ಈ ಮಾಹಿತಿಯನ್ನು ನಿರ್ವಹಿಸಲಾಗುತ್ತದೆ.

ಅದೇರೀತಿ ಸಾಂಸ್ಥಿಕವಲ್ಲದ ದತ್ತುಪಡೆಯುವ ಪ್ರಕರಣಗಳಲ್ಲಿ ದತ್ತು ಪಡೆಯುವ ಪೋಷಕರ ಹೆಸರನ್ನು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಜೈವಿಕ ಪೋಷಕರ ಹೆಸರನ್ನು, ಏಕ ಪೋಷಕ ಅಥವಾ ಅವಿವಾಹಿತ ತಾಯಂದಿರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಹೊಸ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಈ ಮಾಹಿತಿಯನ್ನು ಜನಸಂಖ್ಯೆ ನೋಂದಣಿ, ಮತದಾರರ ನೋಂದಣಿ, ಪಡಿತರ ಚೀಟಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲು ಅವಕಾಶ ಇರುತ್ತದೆ.ರಿಜಿಸ್ಟ್ರಾರ್ ಅವರ ಆದೇಶ ಅಥವಾ ಕ್ರಮದಿಂದ ಯಾರಿಗಾದರೂ ತೊಂದರೆಯಾದಲ್ಲಿ ಅಂತಹ ಆದೇಶದ ವಿರುದ್ಧ 30 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಗೆ 90 ದಿನಗಳ ಒಳಗಾಗಿ ಉತ್ತರ ನೀಡಬೇಕಾಗುತ್ತದೆ.

LEAVE A REPLY

Please enter your comment!
Please enter your name here