ಮಂಗಳೂರು (ಬೆಂಗಳೂರು): ಸಿಲಿಕಾನ್ ಸಿಟಿಯಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಅದ್ದೂರಿಯಾಗಿ ನಡೆಸಲು ಯೋಜನೆ ಹಾಕಿ ಅದನ್ನು ಕಾರ್ಯರೂಪಕ್ಕೆ ತರುವ ಹಗಲಿರುಳು ಶ್ರಮಿಸುತ್ತಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಸೆ.15ರಂದು ಪುತ್ತೂರಿನವರೇ ಆಗಿದ್ದು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿರುವ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಕಚೇರಿಗೆ ತೆರಳಿ ಕಂಬಳಕ್ಕೆ ಸಂಬಂಧ ಪಟ್ಟಂತೆ ಮಾತುಕತೆ ನಡೆಸಿದರು.
ಬೆಂಗಳೂರಿನ ಎಂ.ಜಿ. ರಸ್ತೆಯ ಬಾರ್ಟನ್ ಸೆಂಟರ್ ನಲ್ಲಿರುವ ಗುಣರಂಜನ್ ಶೆಟ್ಟಿ ಕಚೇರಿಗೆ ತೆರಳಿದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಗುಣರಂಜನ್ ಶೆಟ್ಟಿ, ಶಾಸಕರನ್ನು ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಗೌರವಿಸಿದರು.ಬಳಿಕ ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಜೋಡುಕರೆ ಕಂಬಳದ ಕುರಿತಾಗಿ ಗುಣರಂಜನ್ ಶೆಟ್ಟಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಖ್ಯಾತ ಚಿತ್ರ ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧೆಡೆಯಿರುವ ದ.ಕನ್ನಡದ ಖ್ಯಾತ ನಾಮರನ್ನು ಕಂಬಳ ಕೂಟಕ್ಕೆ ಆಹ್ವಾನಿಸುವ ಬಗ್ಗೆ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ ತುಳುಕೂಟ ಬೆಂಗಳೂರು ಅಧ್ಯಕ್ಷ ಸುಂದರ್ ರಾಜ್, ತುಳುಕೂಟ ಬೆಂಗಳೂರು ನಿರ್ದೇಶಕ ಅಕ್ಷಯ್ ರೈ ದಂಬೆಕಾನ, ಮುರಳೀಧರ ರೈ ಮಠಂತಬೆಟ್ಟು, ನವೀನ್ ಕಲ್ಲಡ್ಕ ಉಪಸ್ಥಿತರಿದ್ದರು.