ಮಂಗಳೂರು (ಮಡಿಕೇರಿ): ನಾಲ್ವರು ಮುಸ್ಲಿಂ ಯುವಕರು ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯರನ್ನು ಕಾರಿನಲ್ಲಿ ಅಪಹರಿಸಿದ ಘಟನೆಯೊಂದು ಕೊಡಗಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಹುಡುಗಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಯುವಕರನ್ನು ಬಂಧಿಸಲಾಗಿದೆ.
ಈ ಅಪಹರಣ ಶುಕ್ರವಾರ ಬೆಳಗ್ಗೆ ನಡೆದಿದ್ದು, ಮಡಿಕೇರಿ ಹೊರವಲಯದ ಇಬ್ಬರು ಪಿಯು ವಿದ್ಯಾರ್ಥಿನಿಯರು ಎಂದಿನಂತೆ ಮಡಿಕೇರಿಯ ಸರ್ಕಾರಿ ಕಾಲೇಜಿಗೆ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ನಾಲ್ವರು ಯುವಕರು ಅವರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹೋಗಿದ್ದಾರೆ ಎಂಬ ಸುದ್ದಿ ಒಮ್ಮಿಂದೊಮ್ಮೆಗೆ ಹರಡಿತ್ತು.
ತಕ್ಷಣ ಕಾಲೇಜಿನ ಶಿಕ್ಷಕರು ಪೋಲಿಸರಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಕಾಣೆಯಾದ ಯುವತಿಯರ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಲ್ಲಾ ಕಡೆ ಹುಡುಕಾಟ ಆರಂಭಿಸಿದ್ದಾರೆ. ಅದಾಗಲೇ ಕುಶಾಲನಗರ ತಲುಪಿದ್ದ ಕಾರಿನಲ್ಲಿದ್ದ ಯುವಕರಿಗೆ ವಾಟ್ಸಪ್ ಮೂಲಕ ಪೊಲೀಸರು ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಯುವತಿಯರನ್ನು ಕುಶಾಲನಗರದಲ್ಲಿ ಕಾರಿನಿಂದ ಇಳಿಸಿದ್ದಾರೆ. ಯುವತಿಯರು ಕುಶಾಲನಗರದಿಂದ ಬಸ್ ಹತ್ತಿ ಮಡಿಕೇರಿಗೆ ಬಂದು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ.
ಈ ನಡುವೆ ಪೊಲೀಸರು ತಮ್ಮ ಹುಡುಕಾಟದ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೈಸೂರು ಪೊಲೀಸರು ಮಂಡಿ ಮೊಹಲ್ಲಾಕ್ಕೆ ದಾಳಿ ಮಾಡಿ 4 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಅಪಹರಣಕಾರರನ್ನು ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ನಾಲ್ವರು ಆರೋಪಿಗಳನ್ನು ಮಡಿಕೇರಿಗೆ ಕರೆತಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಯುವತಿಯರಿಗೂ ಯುವಕರಿಗೂ ಮೊದಲೇ ಪರಿಚಯ ಇತ್ತು ಎಂಬ ವಿಚಾರವೂ ಕೇಳಿಬಂದ ನಡುವೆಯೇ ಇಬ್ಬರು ಹುಡುಗಿಯರ ಪೈಕಿ ಒಬ್ಬಾಕೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯೂ ನಡೆದಿದೆ. ವಿಷ ಸೇವಿಸಿದ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.