ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ – ಪ್ಲೇಟ್ ಲೆಟ್ ದಾಸ್ತಾನು ಹೆಚ್ಚಿಸಲು ಸೂಚನೆ

ಮಂಗಳೂರು(ಬೆಂಗಳೂರು): ಡೆಂಗ್ಯೂ ಪ್ರಕರಣಗಳು ಏರುಗತಿಯಲ್ಲಿದ್ದು ರಕ್ತ ನಿಧಿಗಳಲ್ಲಿ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಲ್ಲ ಸರಕಾರಿ ರಕ್ತ ನಿಧಿಗಳಲ್ಲಿ ಪ್ಲೇಟ್‌ಲೆಟ್‌ ದಾಸ್ತಾನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡದಲ್ಲಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಒಂದು ತಿಂಗಳಲ್ಲಿ 3,170 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,040 ಹಾಗೂ ಇತರ ಜಿಲ್ಲೆಗಳಲ್ಲಿ ಒಟ್ಟು 1,130 ಪ್ರಕರಣಗಳು ವರದಿಯಾಗುವುದರ ಜತೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಹೆಚ್ಚಾಗಿದೆ. ಇದರಿಂದ ಪ್ಲೇಟ್‌ಲೆಟ್‌ಗೆ ಬೇಡಿಕೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ರಕ್ತನಿಧಿಗಳಲ್ಲಿ ಪ್ಲೇಟ್‌ಲೆಟ್‌ ಬೇಡಿಕೆ ಪ್ರಮಾಣ ಸರಿಸಮಾರು ಶೇ. 60ರಷ್ಟು ಏರಿಕೆ ಕಂಡಿದೆ. ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ಎರಡು ಮೂರು ತಿಂಗಳ ಹಿಂದೆ ದಿನವೊಂದಕ್ಕೆ 710 ಯೂನಿಟ್‌ ರ್‍ಯಾಂಡಮ್‌ ಡೋನರ್‌ ಪ್ಲೇಟ್‌ಲೆಟ್‌ಗೆ ಬೇಡಿಕೆ ಇತ್ತು. ಆದರೆ ಪ್ರಸ್ತುತ ದಿನವೊಂದಕ್ಕೆ ರ್‍ಯಾಂಡಮ್‌ ಡೋನರ್‌ನಿಂದ 6070 ಯೂನಿಟ್‌ ಹಾಗೂ ಸಿಂಗಲ್‌ ಡೋನರ್‌ನಿಂದ 15 ಯೂನಿಟ್‌ ಪ್ಲೇಟ್‌ಲೆಟ್‌ಗೆ ಬೇಡಿಕೆ ಇದೆ. ಇಲ್ಲಿ ಸಂಗ್ರಹಿಸಿದ ಪ್ಲೇಟ್‌ಲೆಟ್‌ಗಳನ್ನು ನಗರದ ವಿಕ್ಟೋರಿಯಾ, ವಾಣಿವಿಲಾಸ ಸಹಿತ ಸರಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ರಾಷ್ಟ್ರೋತ್ಥಾನ ರಕ್ತನಿಧಿಯ ಅಧಿಕಾರಿ ಹೇಳಿದ್ದಾರೆ.

ರಕ್ತದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ ತೀವ್ರವಾಗಿ ಇಳಿಕೆಯಾಗುವುದು ಡೆಂಗ್ಯೂ ಜ್ವರದ ಒಂದು ಲಕ್ಷಣ. ಸಾಮಾನ್ಯವಾಗಿ ಪ್ಲೇಟ್‌ಲೆಟ್‌ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾದವರಿಗೆ ಮಾತ್ರ ಪ್ಲೇಟ್‌ಲೆಟ್‌ ಸಹಿತ ರಕ್ತ ನೀಡಲಾಗುತ್ತದೆ.

 

 

LEAVE A REPLY

Please enter your comment!
Please enter your name here