ಮಂಗಳೂರು: ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಭೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕೂ ತಾಲ್ಲೂಕಿನ ಗಡಿಭಾಗದಲ್ಲಿ ಜನರ ತಾಪಮಾನ ಪರೀಕ್ಷೆಗೆ ತಂಡಗಳನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದು, ಸೆಪ್ಟೆಂಬರ್ 17 ರಿಂದ ಈ ಎಲ್ಲಾ ತಂಡಗಳು ಕಾರ್ಯರೂಪಕ್ಕೆ ಇಳಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿ ಜಾಲ್ಸೂರು, ಮಂಡೆಕೋಲು, ಬಡ್ಡಡ್ಕ ಸೇರಿದಂತೆ ಇದರ ಆಸುಪಾಸಿನ ಊರುಗಳು, ಪುತ್ತೂರಿನ ಸ್ವರ್ಗ, ಮೇನಾಲ ಹಾಗೂ ಸುಳ್ಯಪದವು, ಬಂಟ್ವಾಳದ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೀರಿಪದವು ಹಾಗೂ ಮಂಗಳೂರಿನ ತಲಪಾಡಿ ಭಾಗದಲ್ಲಿ ಆರೋಗ್ಯ ಇಲಾಖೆ ಜನರ ತಾಪಮಾನ ಪರೀಕ್ಷೆ ಮಾಡಲು ಆರೋಗ್ಯ ಕಾರ್ಯಕರ್ತರನ್ನು ನೇಮಿಸಿದೆ. ಮುಖ್ಯವಾಗಿ ಈ ತಂಡ ಜನರ ತಾಪಮಾನ ಪರೀಕ್ಷೆ ಮಾಡಿ, ಜ್ವರದ ಲಕ್ಷಣಗಳು ಗೋಚರವಾದರೆ ಈ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಚಿಕಿತ್ಸೆ ನೀಡುವ ಕಾರ್ಯವನ್ನು ಕೈಗೊಳ್ಳಲಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯವನ್ನು ಮಾಡಲಿದ್ದಾರೆ.