ಮಳೆ ಕೊರತೆ – ರಾಜ್ಯದ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ – ಕಂದಾಯ ಸಚಿವ ಕೃಷ್ಣ ಬೈರೇಗೌಡ

ಮಂಗಳೂರು(ಬೆಂಗಳೂರು): ರಾಜ್ಯದಲ್ಲಿ ಮಳೆ ಕೊರತೆಯಿಂದ ಅಂದಾಜು 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬರಪೀಡಿತ ತಾಲ್ಲೂಕುಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ರಾಷ್ರೀಯ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ನೆರವು ಕೋರಲು ಮನವಿ ಸಿದ್ಧಪಡಿಸುವ ಕಂದಾಯ, ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳ ಅಧಿಕಾರಿಗಳ ಜತೆ ಸೆ.19ರಂದು ನಡೆಸಿದ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ತಾಲ್ಲೂಕುಗಳಿಂದ ಬೆಳೆ ಹಾನಿಯ ಮಾಹಿತಿ ಸಂಗ್ರಹಿಸಲಾಗಿದೆ. ಈವರೆಗಿನ ಮಾಹಿತಿ ಪ್ರಕಾರ, 42 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಮತ್ತು 2 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಬೆಳೆಹಾನಿಯ ವಿಸ್ತೀರ್ಣ ಇನ್ನಷ್ಟು ಹೆಚ್ಚಾಗುವ ಸಾದ್ಯತೆಯೂ ಇದೆ ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ ಡಿ ಆರ್ ಎಫ್) ಮಾರ್ಗಸೂಚಿಗಳ ಪ್ರಕಾರ, ಕೃಷಿ ಬೆಳೆ ಹಾನಿಗೆ ₹4,000 ಕೋಟಿ ಮತ್ತು ತೋಟಗಾರಿಕಾ ಬೆಳೆ ಹಾನಿಗೆ ₹ 200 ಕೋಟಿ ನೆರವು ಕೋರಲು ಅವಕಾಶವಿದೆ. ಕುಡಿಯುವ ನೀರು ಪೂರೈಕೆ, ಮೇವಿನ ಪೂರೈಕೆ ಸೇರಿದಂತೆ ಒಟ್ಟು ಅಂದಾಜು ₹6,000 ಕೋಟಿ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಅವಕಾಶಗಳಿವೆ ಎಂದ ಅವರು, 41 ತಾಲ್ಲೂಕುಗಳು ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗಿವೆ‌. ಈ ತಾಲ್ಲೂಕುಗಳಲ್ಲಿನ ಪರಿಸ್ಥಿತಿ ಕುರಿತು ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುವುದು. 15 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸುವಂತೆ ಸ್ಥಳೀಯ ಶಾಸಕರು ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರಕ್ಕೆ ಬರಲಾಗುವುದು ಎಂದರು.

ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ₹492 ಕೋಟಿ ಲಭ್ಯವಿದೆ. ಕುಡಿಯುವ ನೀರು ಪೂರೈಕೆ ಸೇರಿದಂತೆ ತುರ್ತು ಕೆಲಸಗಳಿಗೆ ಅನುದಾನದ ಕೊರತೆ ಇಲ್ಲ‌ 13 ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 131 ಜನವಸತಿಗಳಲ್ಲಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 60 ವಾರ್ಡ್ ಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ‌ ಎಂದು ವಿವರಿಸಿದರು.

LEAVE A REPLY

Please enter your comment!
Please enter your name here