ರೋಗಿಗಳಿಗೆ ಫಂಗಸ್‌ ಪೂರಿತ ಮಾತ್ರೆಗಳ ವಿತರಣೆ – ವೀಡಿಯೋ ವೈರಲ್ – ರೋಗಿಗಳ ಕುಟುಂಬಸ್ಥರಿಂದ ಡಿಎಚ್‌ ಓಗೆ ದೂರು

ಮಂಗಳೂರು (ಉಳ್ಳಾಲ): ರೋಗಿಗಳಿಗೆ ಉಪಯೋಗಕ್ಕೆ ಯೋಗ್ಯವಲ್ಲದ ಶಿಲೀಂಧ್ರಪೂರಿತ ಮಾತ್ರೆಗಳನ್ನು ನೀಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಕೆ ಸಿ ನಗರ ನಿವಾಸಿ ಹಸೈನಾರ್ ಎಂಬವರ ಪತ್ನಿ ಹಾಗೂ 6ನೇ ತರಗತಿ ವಿದ್ಯಾರ್ಥಿನಿ ಫಾತಿಮತ್‌ ರಾಫಿಯಾ ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಔಷಧಿ ಪಡಕೊಳ್ಳಲು ಸೆ.21ರಂದು ತೆರಳಿದ್ದರು. ಚಿಕಿತ್ಸೆ ನಡೆಸಿದ ವೈದ್ಯರು ಎರಡು ದಿನದ ಮಾತ್ರೆಗಳನ್ನು ನೀಡಿದ್ದರು. ಹಸೈನಾರ್ ಅವರ‌ ಪುತ್ರಿ ಫಾತಿಮತ್‌ ರಾಫಿಯಾ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಾತ್ರೆಯನ್ನು ಪ್ಯಾಕ್ ನಿಂದ ತೆಗೆದು ನೋಡಿದಾಗ ಮಾತ್ರೆಗಳಲ್ಲಿ ಫಂಗಸ್ ಎನ್ನಬಹುದಾದ ಕಲೆಗಳು ಕಂಡು ಬಂದಿದೆ. ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ‌ಎಲ್ಲಾ ಮಾತ್ರೆಗಳು ಹೀಗೇ ಇವೆ. ಏನೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಗಿಗಳಾದ ತಾಯಿ ಮಗಳು ಮಾತ್ರೆಯ‌ ಫೋಟೋ ತೆಗೆದು ವೈದ್ಯಾಧಿಕಾರಿಗಳಿಗೆ ಕಳಿಸಿ ದೂರು ನೀಡಿದ್ದಾರೆ. ಬಳಿಕ ಅವರು ಖಾಸಗಿ ವೈದ್ಯಕೀಯ ಕೇಂದ್ರಕ್ಕೆ ತೆರಳಿ ಬೇರೆ ವೈದ್ಯರಿಂದ ಔಷಧಿ ಪಡೆದು ವಾಪಸಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದ ಶಿಲೀಂಧ್ರಗೊಂಡ ಔಷಧಿಯ ಚಿತ್ರ ಹಾಗೂ ವಿಡಿಯೋ ವೈರಲ್ ಆಗಿದ್ದು,ಇಂತಹ ಔಷಧಿ ನೀಡಬಹುದೇ ಎಂದು ರೋಗಿಯ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫಂಗಸ್ ಎನ್ನಬಹುದಾದ ಕಲೆ ಇರುವ ಔಷಧಿ ನೀಡಿದ ಬಗೆ ಔಷಧಿ ಪಡಕೊಂಡ ರೋಗಿಯ ಕುಟುಂಬಸ್ಥರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ ಅವರಿಗೆ ದೂರು ನೀಡಿದ್ದು,ಇಂತಹ ಔಷಧಿ ನೀಡುವ ಆರೋಗ್ಯ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ” ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಲಿ ಶಿಲೀಂದ್ರ ಗೊಂಡ ಮಾತ್ರೆ ನೀಡಿದ ಬಗ್ಗೆ ದೂರು ಬಂದಿದ್ದು, ಫಂಗಸ್ ಬಂದ ಮಾತ್ರೆ ಕೊಡದಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಆ ಮಾತ್ರೆ ಬದಲಿಗೆ ಬೇರೆ ಔಷಧಿ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಜ್ವರದ ಮಾತ್ರೆ ಯಲ್ಲಿ ಕಲೆ ಇರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಜ್ವರದ ಮಾತ್ರೆಯಲ್ಲಿ ಫಂಗಸ್ ತರಹದ ಕಲೆ ಇರುವುದು ಕಂಡು ಬಂದಿದೆ. ಆದರೆ ಮಾತ್ರೆಯ ಅವಧಿ ಮುಗಿದಿಲ್ಲ. 2025 ರ ವರೆಗೆ ಅವಧಿ ಇದ್ದು, ಆರೋಗ್ಯ ಜಾಗೃತಿಯ ದೃಷ್ಟಿಯಿಂದ ಈಗ ಆ ಮಾತ್ರೆ ಕೊಡುವುದು ನಿಲ್ಲಿಸಲಾಗಿದ್ದು ಬದಲಿ ಔಷಧಿ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ತಿಳಿದ್ದಾರೆ.

LEAVE A REPLY

Please enter your comment!
Please enter your name here