



ಮಂಗಳೂರು(ಬೆಳ್ತಂಗಡಿ): ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ.







ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು, ಬಿದಿರು, ಗಾಳಿ, ಹೆಬ್ಬಲಸು, ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು ಆನೆಗಳು ತುಳಿದು ಸಂಪೂರ್ಣ ಧ್ವಂಸಗೊಳಿಸಿವೆ. ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಇಟ್ಟಿರಬಹುದೆಂದು ಶಂಕಿಸಲಾಗಿದ್ದು, ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ ಕಾಡಾನೆಗಳು ಇಲ್ಲಿಯೂ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅರಣ್ಯ ಇಲಾಖೆಯ ಈ ನರ್ಸರಿ ರಾಷ್ಟ್ರೀಯ ಹೆದ್ದಾರಿಯಿಂದ 20 ಮೀ.ದೂರದಲ್ಲಿದ್ದು, ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ.















