ಶಾಲಾ ಶಿಕ್ಷಣ ಇಲಾಖೆ – ಪಠ್ಯಪುಸ್ತಕ ಪರಿಷ್ಕರಣೆಗೆ ಐದು ಸಮಿತಿ ರಚನೆ

ಮಂಗಳೂರು(ಬೆಂಗಳೂರು): ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐದು ಸಮಿತಿಗಳನ್ನು ರಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಕನ್ನಡ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ, ಕನ್ನಡ ತೃತೀಯ ಭಾಷೆ, 6, 7ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 8, 9, 10ನೇ ತರಗತಿಯ ಸಮಾಜ ವಿಜ್ಞಾನಕ್ಕೆ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕಿನ ನಿವೃತ್ತ ಪ್ರಾಧ್ಯಾಪಕ ಮಂಜುನಾಥ ಜಿ. ಹೆಗಡೆ ಅವರನ್ನು ಐದೂ ಸಮಿತಿಗಳ ಸಂಯೋಜಕರನ್ನಾಗಿ ನೇಮಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಆಡಳಿತ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ಸಮಿತಿ ಮಾಡಿದ್ದ ಪಠ್ಯಪುಸ್ತಕಗಳ ಎಲ್ಲಾ ತಿದ್ದುಪಡಿಯನ್ನೂ ರದ್ದು ಮಾಡಲಾಗಿತ್ತು. ತಿದ್ದುಪಡಿಗೂ ಮೊದಲು ಇದ್ದ ಪಠ್ಯಕ್ರಮವನ್ನೇ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಸರಿಸಲು ಸೂಚಿಸಲಾಗಿತ್ತು. ಈಗ ಪಠ್ಯಪರಿಷ್ಕರಣೆಗೆ ಸಮಿತಿಗಳನ್ನು ರಚಿಸಲಾಗಿದ್ದು, ಮೂರು ತಿಂಗಳ ಅವಕಾಶ ನೀಡಲಾಗಿದೆ. ಸಮುತಿಗಳು ಕೊಡುವ ಪರಿಷ್ಕರಣಾ ವರದಿಯ ಶಿಫಾರಸುಗಳನ್ನು 2024–25ನೇ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿದೆ.

5 ಸಮಿತಿಗಳ ಅಧ್ಯಕ್ಷರುಗಳಾಗಿ ಅಂಜನಪ್ಪ, ಪ್ರಾಧ್ಯಾಪಕರು, ತುಂಗಾಕಾಲೇಜು, ತೀರ್ಥಹಳ್ಳಿ (ಪ್ರಥಮ ಭಾಷೆ ಕನ್ನಡ). ಎಚ್‌.ಎಸ್‌.ಸತ್ಯನಾರಾಯಣ್‌, ಉಪನ್ಯಾಸಕ, ಸರ್ಕಾರಿ ಬಾಲಿಕ ಪಿಯು ಕಾಲೇಜು, ಬಸವನಹಳ್ಳಿ, ಚಿಕ್ಕಮಗಳೂರು (ದ್ವಿತೀಯ ಭಾಷೆ ಕನ್ನಡ). ಮಂಜಣ್ಣ, ಪ್ರಾಧ್ಯಾಪಕ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ(ತೃತೀಯ ಭಾಷೆ ಕನ್ನಡ). ಎಂ.ಕಿರಣ್‌, ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿವಿ ಕಲಬುರಗಿ (6,7ನೇ ತರಗತಿ ಸಮಾಜ ವಿಜ್ಞಾನ). ಅಶ್ವತ್ಥನಾರಾಯಣ, ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು (8-10ನೇ ತರಗತಿ ಸಮಾಜ ವಿಜ್ಞಾನ) ಇವರುಗಳನ್ನು ನೇಮಿಸಲಾಗಿದೆ.
 

LEAVE A REPLY

Please enter your comment!
Please enter your name here