ದಕ್ಷಿಣ ಕನ್ನಡದ ಕುಮಾರ ಪರ್ವತ – ಭಾರೀ ಪ್ರಮಾಣದ ಮಳೆ ಹಿನ್ನಲೆ – ಚಾರಣಕ್ಕೆ ಅ.3ರಿಂದ ನಿರ್ಬಂಧ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರ ಪರ್ವತದಲ್ಲಿ ಚಾರಣ ನಡೆಸಲು ಅಕ್ಟೋಬರ್ 3ರಿಂದ ನಿರ್ಬಂಧ ವಿಧಿಸಲಾಗಿದೆ‌ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸ್ತುತ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಕಾರಣ ಹಾಗೂ ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದ ಕಾರಣ ಚಾರಣಿಗರ ಹಿತದೃಷ್ಟಿಯಿಂದ ಅ.3ರಿಂದ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಮಳೆಯ ಪ್ರಮಾಣ ಹೆಚ್ಚಿರುವ ಪರಿಣಾಮ ಕಡಿದಾದ ಬೆಟ್ಟವನ್ನು ಏರಲು ಚಾರಣಿಗರಿಗೆ ಅತಿಯಾದ ಸಂಕಷ್ಟ ಮತ್ತು ಕಷ್ಟವಾಗುತ್ತದೆಂದು ನಿರ್ಧರಿಸಿ ನಿರ್ಬಂಧ ವಿಧಿಸಲಾಗಿದೆ. ಇಲಾಖೆಯ ಈ ಆದೇಶಕ್ಕೆ ಚಾರಣಿಗರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆ ಕೋರಿದೆ.

ಬಿರು ಬೇಸಿಗೆ ಮತ್ತು ಅಧಿಕ ಮಳೆಯ ಕಾರಣ ಮೇ ತಿಂಗಳಿನಿಂದ ಸೆಪ್ಟೆಂಬರ್‌ 29ರ ತನಕ ನಿರ್ಬಂಧ ವಿಧಿಸಲಾಗಿತ್ತು. ಶನಿವಾರದಿಂದ ನಿರ್ಬಂಧ ತೆರವುಗೊಳಿಸಿ ಚಾರಣಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಮೊದಲ ದಿನವೇ 750ಕ್ಕೂ ಅಧಿಕ ಚಾರಣಿಗರು ಕುಮಾರ ಪರ್ವತವೇರಲು ಆಗಮಿಸಿದ್ದರು. ಭಾನುವಾರವೂ ಭಾರೀ ಸಂಖ್ಯೆಯ ಚಾರಣಾಸಕ್ತರು ಕುಮಾರಪರ್ವತಕ್ಕೆ ತೆರಳಿದ್ದರು. ಆದರೆ ಈ ದಿನಗಳಲ್ಲಿ ಕುಕ್ಕೆ ಸೇರಿದಂತೆ ಬೆಟ್ಟ ಪ್ರದೇಶದಲ್ಲಿ ಅತ್ಯಧಿಕ ಮಳೆ ಸುರಿದ ಕಾರಣ ಚಾರಣಿಗರಿಗೆ ತೆರಳಲು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here