ಕೆಪಿಟಿ ನಂತೂರು ಬಳಿ ಮರಗಳ ಮಾರಣಹೋಮ – ಪರಿಸರವಾದಿಗಳ ಪ್ರತಿಭಟನೆ
ಮಂಗಳೂರು: ನಗರದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮಂಗಳೂರು ನಗರದೊಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಮಂಗಳೂರಿನ ನಂತೂರಿನಿಂದ-ಕೆಪಿಟಿವರೆಗೆ ನಿತ್ಯ ಗಂಟೆಗಟ್ಟಲೆ ಟ್ರಾಫಿಕ್ ಜಾಂ ಉಂಟಾಗುತ್ತಿದ್ದು, ಇದಕ್ಕಾಗಿ ಈಗ ನಂತೂರಿನಿಂದ-ಕೆಪಿಟಿವರೆಗಿನ ಓವರ್‌ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಆರಂಭಗೊಳ್ಳುತ್ತಿದೆ ಎನ್ನಲಾಗಿದೆ. ಇದೀಗ ಕಾಮಗಾರಿ ಸಲುವಾಗಿ ಹೆದ್ದಾರಿ ಬದಿಯ ಮರಗಳನ್ನು ಕಡಿಯುವುದಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮರಗಳ ಮಾರಣಹೋಮ ವಿರೋಧಿಸಿ ಮರಕ್ಕೆ ಶವಸಂಸ್ಕಾರ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರಿನ ನಂತೂರು ಪದವು ಹೈಸ್ಕೂಲ್ ಬಳಿ ಮರಗಳನ್ನು ಕಡಿಯುವ ಪ್ರಕ್ರಿಯೆ ಆರಂಭಗೊಂಡಿದ್ದು, ಇದನ್ನು ವಿರೋಧಿಸಿ ಪರಿಸರವಾದಿಗಳು, ವಿವಿಧ ಸಂಘಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕಡಿದ ಮರಕ್ಕೆ ಶವ ಸಂಸ್ಕಾರ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಮರಗಳ ಮಾರಣಹೋಮವನ್ನು ವಿರೋಧಿಸಿ ಪರಿಸರವಾದಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ವಿವಿಧ ಪರಿಸರ ಪ್ರೇಮಿ ಸಂಘಟನೆಗಳ ಆಕ್ಷೇಪದ ಹೊರತಾಗಿಯೂ ಹೆದ್ದಾರಿ ಪಕ್ಕದ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ಈ ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸುವಂತೆ ಒತ್ತಾಯಿಸಿದರೂ ಕಿವಿಗೊಟ್ಟಿಲ್ಲ. ಈಗ ಇರುವ ಮರಗಳನ್ನು ಕಡಿಯುವ ಬದಲು ಅದನ್ನು ಶಿಫ್ಟ್ ಮಾಡಿ ಅಂದರು ಕೂಡ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಹೆದ್ದಾರಿ ಪ್ರಾಧಿಕಾರ 1.6 ಕಿಮಿ. ಓವರ್ ಪಾಸ್ ಯೋಜನೆ ರೂಪಿಸಿದ್ದು, ರಸ್ತೆಯ ಎರಡೂ ಕಡೆಗಳನ್ನು ಅಗಲಗೊಳಿಸಿ ರಸ್ತೆ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಕರಾವಳಿಯಲ್ಲಿ ಜಲಕ್ಷಾಮ ಹೆಚ್ಚಾಗುತ್ತಿದೆ. ಈ ನಡುವೆ ಮರಗಳನ್ನು ಉಳಿಸಿ, ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡಬೇಕೆನ್ನುವುದು ಪರಿಸರವಾದಿಗಳ ಆಗ್ರಹ. ಹೀಗಾಗಿ ಇಲ್ಲಿ ಮರಗಳನ್ನು ಕಡಿಯುವ ಬದಲು ಸ್ಥಳಾಂತರ ಮಾಡಬೇಕು ಎನ್ನುವುದು ಪರಿಸರವಾದಿಗಳ ಆಗ್ರಹ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ