ಮಂಗಳೂರು: ನಿವೇಶನ, ಫ್ಲ್ಯಾಟ್ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಗೆ ಹೋಗಿ ಬಯೋಮೆಟ್ರಿಕ್ ನೀಡುತ್ತಿರುವ ಹಲವು ಜನರ ಬ್ಯಾಂಕ್ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಿದ್ದು ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ನಡೆದಿದ್ದು ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಕಳವಳ ವ್ಯಕ್ತಪಡಿಸಿದರು.
ಕಳೆದ ತಿಂಗಳಿನಿಂದ ಸಾರ್ವಜನಿಕರು ಜಾಗ ಮಾರಾಟ ಮತ್ತು ಖರೀದಿಗಾಗಿ ಬಯೋಮೆಟ್ರಿಕ್ ನೀಡಿದ ಕೆಲವೇ ದಿನಗಳಲ್ಲಿ ಖಾತೆಯಿಂದ 10 ಸಾವಿರ ರೂ. ಡ್ರಾ ಆಗುತ್ತಿದೆ. ಸೈಬರ್ ವಂಚಕರು ಇಲ್ಲಿ ಮೈಕ್ರೋ ಎಟಿಎಂ ಎಂಬ ಹೊಸ ಮಾದರಿಯ ತಂತ್ರಗಾರಿಕೆ ಬಳಸಿದ್ದು ಹಣ ಡ್ರಾ ಮಾಡಲು ಒಟಿಪಿ, ಸಿವಿವಿ, ಬ್ಯಾಂಕ್ ವಿವರ ಬೇಕಾಗಿಲ್ಲ. ಕೇವಲ ಖಾತೆದಾರರ ಆಧಾರ್ ಬಯೋಮೆಟ್ರಿಕ್ ಬಳಸಿ ವಂಚನೆ ಎಸಗುತ್ತಿರುವ ಬಗ್ಗೆ ದೂರುಗಳು ದಾಖಲಾಗಿವೆ. ನೋಂದಣಿ ಕಚೇರಿಗೆ ಯಾವುದೇ ಒಬ್ಬ ವ್ಯಕ್ತಿ ಬಯೋಮೆಟ್ರಿಕ್ ಕೊಟ್ಟ ಮೇಲೆ ಅದು ಸೈಬರ್ ವಂಚಕರಿಗೆ ಹೇಗೆ ತಲುಪುತ್ತಿದೆ? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸರ್ಕಾರಿ ಕಚೇರಿಗೆ ಬಂದು, ಸರ್ಕಾರ ನಿಗದಿಪಡಿಸಿದ ತೆರಿಗೆಯನ್ನು ಕಟ್ಟಿ, ನಿಯಮಗಳನ್ನು ಪಾಲಿಸಿದ ಮೇಲೆ, ವಂಚಕರಿಗೆ ಮಾಹಿತಿ ಸೋರಿಕೆಯಾಗಿ ಸಾರ್ವಜನಿಕರು ಹೀಗೆ ಅನ್ಯಾಯವಾಗಿ ಹಣ ಕಳೆದುಕೊಂಡರೆ ಅದರ ನೇರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರ ಅಧಿಕೃತವಾಗಿ ದೂರು ಸಲ್ಲಿಸಿದ ಎಲ್ಲಾ ಸಂತ್ರಸ್ತರಿಗೂ ಹಣ ಮರಳಿಸಿ ನ್ಯಾಯ ಒದಗಿಸಬೇಕು. ಇತ್ತೀಚೆಗೆ ಮೂಡುಶೆಡ್ಡೆಯ ಕೂಲಿ ಕಾರ್ಮಿಕನೊಬ್ಬ ತಾನು ಕಷ್ಟ ಪಟ್ಟು ದುಡಿದು ಬ್ಯಾಂಕಿನಲ್ಲಿಟ್ಟಿದ್ದ ಹತ್ತು ಸಾವಿರ ರೂಪಾಯಿಗಳನ್ನು ಇದೇ ಮಾದರಿಯಲ್ಲಿ ಕಳೆದುಕೊಂಡಿದ್ದು ನನ್ನ ಗಮನಕ್ಕೆ ಬಂದಿದೆ.
ಸಬ್ ರಿಜಿಸ್ಟರ್ ಕಚೇರಿ ಎಂಬುದು ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಇಲ್ಲಿಂದಲೇ ಸೈಬರ್ ವಂಚಕರಿಗೆ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ ಬ್ಯಾಂಕ್ ಖಾತೆಯಿಂದ ಹಣ ದೋಚಲಾದರೆ ಇನ್ನು ಜನಸಾಮಾನ್ಯರು ಯಾರನ್ನು ನಂಬುವುದು? ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬಿಟ್ಟು ಈ ಕೂಡಲೇ ಗಮನಹರಿಸಬೇಕು. ತಂತ್ರಜ್ಞಾನ ಮುಂದುವರಿದಂತೆ ಸೈಬರ್ ಕಳ್ಳರು ಬುದ್ದಿವಂತರಾಗುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ನಮ್ಮ ವ್ಯವಸ್ಥೆ ಅವರಿಗಿಂತಲೂ ಬುದ್ಧಿವಂತರಾಗಿ ಜನಸಾಮಾನ್ಯರ ಹಿತವನ್ನು ಕಾಪಾಡಬೇಕು ಎಂದು ಸ್ಥಳೀಯ ಪೊಲೀಸರು ಹಾಗೂ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಮತ್ತು ಇನ್ನು ಮುಂದಕ್ಕೆ ಯಾವುದೇ ನೋಂದಣಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು, ವಕೀಲರು ಸೇರಿದಂತೆ ಎಲ್ಲರೂ ಇಂತಹ ವಂಚನೆಗಳಿಂದ ಬಹಳ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡುತ್ತೇನೆ ಎಂದರು.