ಎಷ್ಟೊಂದು ಸುಂದರ-ಮಂಗಳೂರು ದಸರಾ- 34ನೇ ವರ್ಷದ ಮಂಗಳೂರು ದಸರಾ ಅಕ್ಟೋಬರ್ 15ರಿಂದ ಪ್ರಾರಂಭ

ಮಂಗಳೂರು: ಐತಿಹಾಸಿಕ 34 ನೇ ವರ್ಷದ ಮಂಗಳೂರು ದಸರಾ ಅಕ್ಟೋಬರ್ 15ರಿಂದ ಶ್ರೀ ಕ್ಷೇತ್ರ ಕುದ್ರೊಳಿಯಲ್ಲಿ ಪ್ರಾರಂಭವಾಗುತ್ತಿದ್ದು ಸಿದ್ದತೆಗಳು ಭರದಿಂದ ಸಾಗಿವೆ. ಈ ಬಾರಿಯ ದಸರಾ ಸಿದ್ದತೆಗಳ ಬಗ್ಗೆ ದೇವಳದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ ಕಳೆದ 33 ವರ್ಷಗಳಿಂದ ವರ್ಷಂಪ್ರತಿ ಕ್ಷೇತ್ರದಲ್ಲಿ ನಡೆಯುತ್ತಿದ್ದು ಈ ಬಾರಿಯೂ ವಿಶ್ವವಿಖ್ಯಾತ ಮಂಗಳೂರು ದಸರಾ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಇದೇ ತಿಂಗಳ ಅ.15ರಂದು ಶ್ರೀ ಗಣೇಶ, ನವದುರ್ಗೆ ಮತ್ತು ಶ್ರೀ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದರು. ಬಳಿಕ ಮಾತಾಡಿದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು, ದಸರಾ ಮಹೋತ್ಸವವು ಅ.25ರವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದ್ದು, ಅ. 24ರಂದು 4 ಗಂಟೆಗೆ ಸರಿಯಾಗಿ “ಮಂಗಳೂರು ದಸರಾ” ಮೆರವಣಿಗೆ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ರಾಜರಸ್ತೆಯಲ್ಲಿ ಸಾಗಿ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ.

ಅ.15ರಿಂದ ಅಕ್ಟೋಬರ 23ರವರೆಗೆ ದಿನಂಪ್ರತಿ ಸಂಜೆ 6.00 ರಿಂದ ರಾತ್ರಿ 9.00 ಗಂಟೆಯವರೆಗೆ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಮಂಗಳೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಬರುವ ಭಾರತೀಯ ಸನಾತನ ಧರ್ಮದ, ಇತಿಹಾಸ ಭಾವದ ನೆನಪುಗಳನ್ನು ಸ್ಮರಿಸುವ ವಿಶೇಷ ಟ್ಯಾಬ್‌ ಗಳು ಭಾಗವಹಿಸಲಿದ್ದು ಈ ಸುಂದರ ಮೆರವಣಿಗೆ ವಿಶೇಷ ಮೆರುಗು ನೀಡಲಿದೆ. ಸಾಂಸ್ಕೃತಿಕ ಮೆರವಣಿಗೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿರುವ ಎಲ್ಲಾ ಕಟ್ಟಡದ ಮಾಲಕರು ತಮ್ಮ ತಮ್ಮ ಕಟ್ಟಡಗಳನ್ನು ವಿದ್ದುದ್ದೀಪದಿಂದ ಅಲಂಕರಿಸಿ “ಮಂಗಳೂರು ದಸರಾ” ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಹರಿಕೃಷ್ಣ ಬಂಟ್ವಾಳ್, ಸಮಿತಿ ಸದಸ್ಯರಾದ ಕೆ. ಮಹೇಶ್ಚಂದ್ರ, ರವಿಶಂಕರ್ ಮಿಜಾರ್, ಎಂ. ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವೇಂದ್ರ ಪೂಜಾರಿ, ಡಾ.ಅನುಸೂಯ ಬಿ.ಟಿ. ಸಾಲಿಯಾನ್, ಕಿಶೋರ್ ಯೆಯ್ಯಾಡಿ, ಚಂದನ್, ಡಾ. ಬಿ.ಜಿ. ಸುವರ್ಣ, ವಾಸುದೇವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here