ರಾಗಿಗುಡ್ಡ ಪ್ರಕರಣ – ಸ್ಥಳಕ್ಕೆ ಕಟೀಲ್ ನೇತೃತ್ವದ ಬಿಜೆಪಿ ನಿಯೋಗ – ನ್ಯಾಯಾಂಗ ತನಿಖೆಗೆ ಆಗ್ರಹ

ಮಂಗಳೂರು(ಶಿವಮೊಗ್ಗ): ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಹಿಂದು ಮುಸ್ಲಿಂ ಗಲಾಟೆಗಳು ಹೆಚ್ಚುತ್ತಿವೆ. ರಾಗಿಗುಡ್ಡ ಪ್ರಕರಣ ಇದರ ಮುಂದುವರಿಕೆ ಅಷ್ಟೇ. ರಾಗಿಗುಡ್ಡದಲ್ಲಿ ಹಿಂದೂ ಕಾರ್ಯಕರ್ತರ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ಎಸೆಯಲಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಅ.5ರಂದು ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸತ್ಯ ಶೋಧನಾ ತಂಡ ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿತು. ನಂತರ ರಾಗಿಗುಡ್ಡಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈದ್‌ ಮಿಲಾದ್‌ ಹಬ್ಬದ ಸಂದರ್ಭದಲ್ಲಿ ಕೆಲವು ಕಟೌಟ್‌ಗಳನ್ನು ಹಾಕಲಾಗಿದೆ. ಅಲ್ಲಿ ಕತ್ತಿ, ಟಿಪ್ಪು ಹಾಗೂ ಔರಂಗಜೇಬ್‌ ಕಟೌಟ್‌ಗಳು ಹಾಕಿರುವ ಉದ್ದೇಶ ನೋಡಿದರೆ ಹಿಂದೂಗಳ ಭಾವನೆ ಕೆರಳಿಸಲು ಹಾಕಿದ್ದಾರೆ ಎಂಬುದು ಸ್ಪಷ್ಟ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ? ಇಂತಹ ಘಟನೆ ನಡೆಯಲು ಪೊಲೀಸರ ವೈಫಲ್ಯವೇ ಕಾರಣ ಎಂದು ಆರೋಪಿಸಿದರು. ಮುಸ್ಲಿಮರು ಇಷ್ಟು ಧೈರ್ಯವಾಗಿ ಹಿಂದೂ ಕಾರ್ಯಕರ್ತರ ಮನೆಗಳಿಗೆ ಕಲ್ಲು ಎಸೆಯುತ್ತಾರೆ ಎಂದರೆ ಅದಕ್ಕೆ ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕು ಕಾರಣ. ಮೊದಲೇ ಯೋಜನೆ ಹಾಕಿಕೊಂಡು ಕಲ್ಲು ಹೊಡೆಯಲಾಗಿದೆ. ಮಹಿಳೆಯರ ರಕ್ಷಣೆಗೆ ಬಂದ ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಅಷ್ಟೇ ಅಲ್ಲ ಅವರ ಮೇಲೆ ಎಫ್‌ಐಆರ್‌ ಹಾಕಲಾಗಿದೆ ಎಂದರು.

ಇಡೀ ಪ್ರದೇಶ ನೋಡಿದಾಗ ಮುಸ್ಲಿಂ ಮಹಿಳೆಯರು ಕೂಡ ಆ ಗಲಭೆಯದಲ್ಲಿ ಭಾಗಿಯಾಗಿದ್ದಾರೆ. ಮುಸ್ಲಿಂ ಮನೆಗಳ ಮೇಲೆ ಕಲ್ಲು ತೂರಾಟ ಎಲ್ಲೂ ನಡೆದಿಲ್ಲ. ಮೊದಲೇ ಮನೆಗಳನ್ನು ಗುರಿ ಮಾಡಿ ಕಲ್ಲು ಹೊಡೆಯಲಾಗಿದೆ. ಐದು ಹಿಂದೂ ಯುವಕರು ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಆದೇಶದ ಬಳಿಕ ಹಿಂದೂ ಯುವಕರನ್ನು ಬಂಧಿಸಲಾಗಿದ್ದು ಕಾಂಗ್ರೆಸ್‌ ಸರ್ಕಾರ  ಉಗ್ರವಾದಿಗಳ, ಆತಂಕವಾದಿಗಳ ಪರವಾಗಿದೆ ಎಂಬುದು ಸ್ಪಷ್ಟವಾಗಿದೆ.ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಾಕಿಸ್ತಾನಕ್ಕೆ ಜಿಂದಾಬಾದ್‌ ಹೇಳಿ ಸಂಭ್ರಮ ಆಚರಿಸಲಾಯಿತು. ಈ ಬಗ್ಗೆ ಯಾವುದೇ ಕ್ರಮ ಇಲ್ಲ. ಕಾಂಗ್ರೆಸ್‌ ಇವರಿಗೆ ಸಪೋರ್ಟ್‌ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ನಿಯೋಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಅಶ್ವತ್ಥನಾರಾಯಣ್, ರವಿಕುಮಾರ್, ಕೆ ಎಸ್ ಈಶ್ವರಪ್ಪ, ಸಂಸದ ರಾಘವೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರಿದ್ದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here