ಟೆಲಿಕಮ್ಯುನಿಕೇಶನ್‌ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಮೊಬೈಲ್‌ ಮೂಲಕ ತುರ್ತು ಎಚ್ಚರಿಕೆ ಸಂದೇಶ – ಇಂದು ಟೆಸ್ಟ್‌ ಸಂದೇಶ

Alert message mobile notification. Hand holding smartphone with exclamation sign, virus notification on phone screen vector red error or spam messaging device prevention concept

ಮಂಗಳೂರು: ಮುಂಬರುವ ದಿನದಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಟೆಲಿಕಮ್ಯುನಿಕೇಶನ್‌ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ವಿಭಿನ್ನ ಧ್ವನಿ ಮತ್ತು ಕಂಪನದ ಮೂಲಕ ಸಕಾಲಿಕ ಮುನ್ನೆಚ್ಚರಿಕೆ ನೀಡಲು ಮುಂದಾಗಿದೆ. ಅದರ ಭಾಗವಾಗಿ ರಾಜ್ಯದಲ್ಲಿ ಇಂದು (ಅ. 12) ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ.

ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್‌) ಸೆಲ್‌ ಬ್ರಾಡ್‌ ಕಾಸ್ಟಿಂಗ್‌ ಮೂಲಕ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ಈ ಕುರಿತು ಈಗಾಗಲೇ ಮೊಬೈಲ್‌ ಬಳಕೆದಾರರಿಗೆ ಸಂದೇಶಗಳು ರವಾನೆಯಾಗಿದೆ. ಫೋನ್‌ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್‌ ಶಬ್ದದೊಂದಿಗೆ ಸಂದೇಶ ಫ್ಲಾಶ್‌ ಆಗಲಿದೆ. ಎಚ್ಚರಿಕೆ ಸಂದೇಶವನ್ನು ಓದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬಳಕೆದಾರರು ಸರಿ ಎಂದು ಒತ್ತುವವರೆಗೂ ಈ ಬೀಪ್‌ ಬರುತ್ತಲೇ ಇರುತ್ತದೆ. ಈ ಮೂಲಕ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ಸಂದೇಶದಲ್ಲಿ ದೂರಸಂಪರ್ಕ ಇಲಾಖೆಯ ಸೆಲ್‌ ಬ್ರಾಡ್‌ಕಾಸ್ಟಿಂಗ್‌ ಸಿಸ್ಟಮ್‌ ಮೂಲಕ ಕಳುಹಿಸಿದ ಸ್ಯಾಂಪಲ್‌ ಪರೀಕ್ಷಾ ಸಂದೇಶವಾಗಿದ್ದು, ಇದನ್ನು ನಿರ್ಲಕ್ಷಿಸಿ. ನೀವು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರವು ಜಾರಿಗೆ ತರುತ್ತಿರುವ ಪ್ಯಾನ್‌ ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸುವ ಸಲುವಾಗಿ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ನೀಡುವ ಗುರಿಯನ್ನು ಹೊಂದಿದೆ ಎನ್ನುವುದಾಗಿ ಉಲ್ಲೇಖವಾಗಲಿದೆ.

ಭೂಕಂಪ, ಸುನಾಮಿ, ಅಗ್ನಿ ದುರಂತ ಮತ್ತು ಹಠಾತ್‌ ಪ್ರವಾಹ, ಯುದ್ಧಗಳಂತಹ ವಿಪತ್ತುಗಳ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣ ಪ್ರಾಧಿಕಾರವನ್ನು ಸನ್ನದ್ಧರಾಗಿಸಲು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಈ ವ್ಯವಸ್ಥೆ ಸಹಕಾರ ನೀಡಲಿದೆ. ಮುಂದಿನ ದಿನದಲ್ಲಿ ವಿಕೋಪಗಳು ಸಂಭವಿಸಬಹುದಾದ ಸ್ಥಳಗಳಲ್ಲಿನ ಮೊಬೈಲ್‌ ಬಳಕೆದಾರರಿಗೆ ಈ ಫ್ಲಾಶ್‌ ಸಂದೇಶದ ಮೂಲಕ ಎಚ್ಚರಿಸಲಾಗುತ್ತದೆ. ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ಇಂದು ರಾಜ್ಯದಲ್ಲಿ ನಡೆಯಲಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಮುಂದಿನ ದಿನದಲ್ಲಿ ವಿಕೋಪವನ್ನು ಮುಂಚಿತವಾಗಿ ಗ್ರಹಿಸಿ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಇದು ಅನುಕೂಲವಾಗಲಿದೆ ಎಂದು ದೂರಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here