ಮಂಗಳೂರು: ಅನಾಥ ರೋಗಿಗಳಿಗೆ ಸಹಾಯ ಮಾಡುತ್ತಿದ್ದ ಸಮಾಜಸೇವಕ ಮುಲ್ಕಿ ನಿವಾಸಿ ಆಪತ್ಭಾಂಧವ ಎಂದೇ ಗುರುತಿಸಲ್ಪಟ್ಟಿದ್ದ ಆಸಿಫ್ ಅವರನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯೂರಿಟಿ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಆಸಿಫ್ ಅ.11ರಂದು ಸಂಜೆ ವೆನ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆತಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಸೆಕ್ಯುರಿಟಿ ಗಾರ್ಡ್ ವಾಹನವನ್ನು ಹೊರಗೆ ಒಯ್ಯುವಂತೆ ಸೂಚಿಸಿದಾಗ ತಾನು ರೋಗಿಗಳನ್ನು ಅಡ್ಮಿಷನ್ ಮಾಡಿಸುತ್ತಿದ್ದೇನೆ, ಸ್ವಲ್ಪ ಹೊತ್ತು ಕಾಯಿರಿ ಎಂದು ಆಸಿಫ್ ಹೇಳಿದ್ದಾರೆ. ಆದರೆ ಕೆಲವು ಹೊತ್ತಿನ ಬಳಿಕವೂ ಆ್ಯಂಬುಲೆನ್ಸ್ ತೆರವು ಮಾಡದಿದ್ದಾಗ ಮಹಿಳಾ ಸಿಬ್ಬಂದಿ ಆಕ್ಷೇಪಿಸಿದ್ದಾರೆ. ಈ ಸಂದರ್ಭ ಆಸಿಫ್ ಮತ್ತು ಮಹಿಳಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ತನ್ನನ್ನು ದೂಡಿ ಹಾಕಿ ಆಸಿಫ್ ಹಲ್ಲೆ ಮಾಡಿದ್ದಾರೆ ಎಂದು ಮಹಿಳಾ ಸಿಬ್ಬಂದಿ ನೀಡಿದ ದೂರಿನ ಹಿನ್ನಲೆಯಲ್ಲಿ ಪೊಲೀಸರು ಆಸಿಫ್‌ನನ್ನು ವಶಕ್ಕೆ ಪಡೆದಿದ್ದು, ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.