ಮಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಜಸ್ಥಾನ ವಿಧಾನಸಭೆ ಚುನಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ನವೆಂಬರ್ 23 ರ ಬದಲಿಗೆ ನವೆಂಬರ್ 25 ರಂದು ಒಂದೇ ಹಂತದಲ್ಲಿ ಮತದಾನವನ್ನು ನಡೆಸಲಿದೆ. ಫಲಿತಾಂಶವು ಡಿಸೆಂಬರ್ 3 ರಂದು ಪ್ರಕಟಗೊಳ್ಳಲಿದೆ.
ನವೆಂಬರ್ 23ರಂದು ರಾಜ್ಯಾದ್ಯಂತ ಮದುವೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಉಲ್ಲೇಖಿಸಿ, ಚುನಾವಣಾ ಆಯೋಗವು ದಿನಾಂಕವನ್ನು ಪರಿಷ್ಕರಿಸಿರುವುದಾಗಿ ತಿಳಿಸಿದೆ. ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳಿಂದ ಆಯೋಗವು ಮನವಿಯನ್ನು ಸ್ವೀಕರಿಸಿದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುವ ದೊಡ್ಡ ಪ್ರಮಾಣದ ಮದುವೆ, ಸಾಮಾಜಿಕ ಕಾರ್ಯಕ್ರಮಗಳನ್ನು ಪರಿಗಣಿಸಿ ಮತದಾನದ ದಿನಾಂಕ ಬದಲಾವಣೆ ಮಾಡಲಾಗಿದೆ. ಅಂದು ಮತದಾನ ನಡೆದರೆ ವಿವಿಧ ಕಾರ್ಯಕ್ರಮಗಳಲ್ಲಿ ಜನರು ಪಾಲ್ಗೊಂಡು ಮತದಾನ ಪ್ರಮಾಣ ಕಡಿಮೆಯಾಗಬಹುದು ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.