ಇಸ್ರೇಲ್‌-ಪ್ಯಾಲೆಸ್ತೀನ್ ಯುದ್ಧ – ಹಮಾಸ್ ಬೆಂಬಲಿಸಿ ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ದಾಖಲು

ಮಂಗಳೂರು: ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ನ ಹಮಾಸ್ ನಡುವಿನ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದೀಗ ಮಂಗಳೂರಿನ ವ್ಯಕ್ತಿಯೊಬ್ಬ ಹಮಾಸ್ ಬೆಂಬಲಿಸಿ ವೀಡಿಯೋ ಹರಿಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ.

ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬಾನ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ಝಾಕಿರ್ ಎಂಬಾತ ಹಮಾಸ್ ಬೆಂಬಲಿಸಿ, ಪ್ಯಾಲೇಸ್ಟೈನ್, ಗಾಜಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲು ಪ್ರಾರ್ಥಿಸುವಂತೆ ಕರೆ ನೀಡಿ ವೀಡಿಯೋ ಹರಿಬಿಟ್ಟಿದ್ದಾನೆ. ಈತನ ವಿವಾದಾತ್ಮಕ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಉಗ್ರರಿಗೆ ಬೆಂಬಲ ಕೊಡುವ ಇವನ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳುವಂತೆ ಶರಣ್ ಪಂಪ್‌‌ವೆಲ್ ಆಗ್ರಹಿಸಿದ್ದಾರೆ. ಇನ್ನೊಂದೆಡೆ ಕದ್ರಿ ನಿವಾಸಿ ಪ್ರದೀಪ್‌ ಕುಮಾರ್‌ ಎನ್ನುವವರು ಈತನ ವಿರುದ್ಧ ನಗರದ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಕೃತ್ಯದ ಬಗ್ಗೆ ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ವಿನಾಯಕ ತೋರಗಲ್ ಅವರು ಸ್ವಯಂ ದೂರು ದಾಖಲಿಸಿ ಆರೋಪಿ ಜಾಕಿರ್ ಯಾನೆ ಜಾಕಿ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಝಾಕಿರ್‌ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿತ್ತು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here