ಕಚ್ಚಾ ಬಾಂಬ್ ತಯಾರಿಸುತ್ತಿದ್ದ ಶಿವಮೊಗ್ಗ ಮೂಲದ ಇಬ್ಬರ ಬಂಧನ 

ಮಂಗಳೂರು(ಉಡುಪಿ): ಉಡುಪಿ ಜಿಲ್ಲೆಯ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಬಳಿಯ ಹಾಡಿಯಲ್ಲಿ ಹಂದಿ ಬೇಟೆಗಾಗಿ ಇಡಲಾದ ಕಚ್ಚಾ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಚೆನ್ನಗಿರಿ ಮೂಲದ ಕಾಶಿನಾಥ ಜೆ.ಎಸ್(30), ಶಿವಮೊಗ್ಗ ಜಿಲ್ಲೆಯ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಯಹೋ ಶಿವು(25) ಬಂಧಿತ ಆರೋಪಿಗಳು. ಇವರು ಕಚ್ಚಾ ಬಾಂಬ್ ಸಾಗಾಟಕ್ಕೆ ಬಳಸಿದ 15 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ಮತ್ತು 10 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅ.12ರಂದು ಕಾಡು ಹಂದಿ ಬೇಟೆಗಾಗಿ ಇಡಲಾದ ಕಚ್ಚಾ ಬಾಂಬ್ ಕಚ್ಚಿದ ಪರಿಣಾಮ ಸುಧೀರ್ ಪೂಜಾರಿ ಎಂಬವರ ಸಾಕು ನಾಯಿ ಸಾವನ್ನಪ್ಪಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಕ್ರಮ ಸ್ಫೋಟಕ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಬಂಧಿತ ಇಬ್ಬರು ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಇನ್ನಿತರ ಕಡೆ ಸ್ಥಳೀಯವಾಗಿ ಸಿಗುವ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಬಳಸಿ ಕಚ್ಚಾ ಬಾಂಬ್‌ಗಳನ್ನು ತಯಾರಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

LEAVE A REPLY

Please enter your comment!
Please enter your name here