ಮಂಗಳೂರು(ಬಂಟ್ವಾಳ): ಬಡವರು, ಕೂಲಿಕಾರ್ಮಿಕರು ಸರಕಾರಿ ಬಸ್ಸಿನಲ್ಲಿ ಮೀನು ಮಾಂಸ ಕೊಂಡೊಯ್ಯಬಾರದೇ ? ಇಂತಹದ್ದೊಂದು ಜಿಜ್ಞಾಸೆ ಸಾರ್ವಜನಿಕರಲ್ಲಿ ಮೂಡಿದ್ದು ಬಡವರು ಒಂದು ಕೆ.ಜಿ ಕೋಳಿ ಮಾಂಸಕ್ಕಾಗಿ ಕಾರು, ರಿಕ್ಷಾವನ್ನು ಬಾಡಿಗೆಗೆ ಗೊತ್ತು ಪಡಿಸಿ ಹೋಗಬೇಕೆ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಸುರೇಶ್ ಎನ್ನುವ ಬಡ ಕೂಲಿಕಾರ್ಮಿಕ ಒಂದು ಕೆ.ಜಿ ಕೋಳಿ ಮಾಂಸದೊಂದಿಗೆ ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್-ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ಏರಿದ್ದಾನೆ. ಬಸ್ಸಿನ ನಿರ್ವಾಹಕ ಟಿಕೆಟ್ ನೀಡಲು ಬಂದಾಗ ಚೀಲದಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ ಸುರೇಶ್ ಒಂದು ಕೆ.ಜಿ ಕೋಳಿ ಮಾಂಸ ಇದೆಯೆಂದು ಸತ್ಯವನ್ನೇ ಹೇಳಿದ್ದಾನೆ. ಕೋಳಿ ಮಾಂಸ ಎನ್ನುವ ಪದ ಕೇಳುತ್ತಾಳೇ ನಿರ್ವಾಹಕ ಬಸ್ಸಿನಲ್ಲಿ ಮಾಂಸ ಕೊಂಡೊಯ್ಯಲು ಅವಕಾಶವಿಲ್ಲವೆಂದು ಹೇಳಿ ಆತನಿಗೆ ಬಸ್ಸಿನಿಂದ ಇಳಿಯುವಂತೆ ಸೂಚಿಸಿದ್ದಾರೆ. ಆದರೆ ಇದರ ಅರಿವಿಲ್ಲದ ಸುರೇಶ್ ಬಸ್ಸಿನಿಂದ ಇಳಿಯಲು ನಿರಾಕರಿಸಿದ್ದಾನೆ. ನಿರ್ವಾಹಕ ಮತ್ತು ಸುರೇಶ್ ಮಧ್ಯೆ ಕೆಲಹೊತ್ತು ವಾಗ್ವಾದವೂ ನಡೆದಿದೆ. ಈ ವೇಳೆ ನಿರ್ವಾಹಕ ಆತನನ್ನು ಕೆಟ್ಟಪದಗಳಿಂದ ನಿಂದಿಸಿದ್ದಾನೆ. ಇಷ್ಟೆಲ್ಲಾ ನಡೆದರೂ ಸುರೇಶ್ ಬಸ್ಸಿನಿಂದ ಇಳಿದಿಲ್ಲ. ಇದರಿಂದ ರೋಸಿ ಹೋದ ಬಸ್ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನು ಠಾಣೆಗೆ ಕರೆದೊಯ್ದಿದ್ದಾನೆ. ಅಲ್ಲಿ ಪ್ರಯಾಣಿಕ ಸುರೇಶ್ ನನ್ನು ಎಳೆದು ಕೆಳಗಿಳಿಸಲಾಗಿದೆ. ವಿಷಯ ಆಲಿಸಿದ ಠಾಣೆಯ ಎಸ್ ಐ ರಾಮಕೃಷ್ಣ ಅವರು ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಬುದ್ಧಿ ಮಾತು ಹೇಳಿದ್ದಾರೆ.
ಕೂಲಿ ಕಾರ್ಮಿಕರು ಬಸ್ಸಿನಲ್ಲಿ ಮೀನು ಮಾಂಸ ಕೊಂಡೊಯ್ಯಲು ಅವಕಾಶ ಇಲ್ಲ ಎಂದಾದರೆ ಹೇಗೆ ಕೊಂಡೊಯ್ಯುವುದು ಎಂಬ ಪ್ರಶ್ನೆಯನ್ನು ಸುರೇಶ್ ಮುಂದಿಟ್ಟಿದ್ದಾನೆ. ಬಡವರು ಕೋಳಿ ಮಾಂಸ ಕೊಂಡುಹೋದರೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ. ಬಸ್ಸಿನ ನಿರ್ವಾಹಕ ಮತ್ತು ಚಾಲಕನ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶದ ಮಾತುಗಳು ಕೇಳಿ ಬಂದಿದೆ. ಕೆ ಎಸ್ ಆರ್ ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಬಸ್ಸಿನಲ್ಲಿ ಕೋಳಿ, ಮೀನು, ಮಾಂಸ ತರುವಂತಿಲ್ಲ. ಜೀವ ಇರುವ ವಸ್ತುಗಳನ್ನು ತರಬಹುದು. ಮೀನು, ಮಾಂಸದ ವಾಸನೆಯಿಂದ ಬಸ್ಸಿನಲ್ಲಿರುವ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ನಿಗಮ ಇಂತಹದ್ದೊಂದು ಆದೇಶ ಮಾಡಿದೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ ಈ ಘಟನೆ ಬಡವರು, ಕೂಲಿ ಕಾರ್ಮಿಕರು ಒಂದು ಕೆ.ಜಿ ಮಾಂಸ ಕೊಂಡೊಯ್ಯುವುದಕ್ಕಾಗಿ ಇತರ ಬಾಡಿಗೆ ವಾಹನಗಳನ್ನು ಅವಲಂಬಿಸಬೇಕೆ ಎನ್ನುವ ಪ್ರಶ್ನೆಯನ್ನಂತು ಹುಟ್ಟುಹಾಕಿದೆ. ಬದಲಾವಣೆ ಕೆ ಎಸ್ ಆರ್ ಟಿ ಸಿ ಇಲಾಖೆಗೆ ಬಿಟ್ಟದ್ದು.