ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ಗಲಾಟೆ, ದೊಂಬಿ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಜಾಲ್, ಫೈಜಲ್ ನಗರ ನಿವಾಸಿ ತೌಸೀಫ್(27) ಬಂಧಿತ ಆರೋಪಿ. ಈತ ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ, ಪೊಲೀಸರಿಗೂ ಸಿಗದೇ ತಲೆಮರೆಸಿಕೊಂಡು ವಿದೇಶದಲ್ಲಿ ಅಡಗಿದ್ದ. ಮಂಗಳೂರು ಗ್ರಾಮಾಂತರ ಪೊಲೀಸರು ಈತನ ವಿರುದ್ಧ ಲುಕ್ ಔಟ್ ನೋಟೀಸ್ ಹೊರಡಿಸಿದ್ದರು. ಅ.14ರಂದು ಈತನು ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರಲು ಮುಂಬೈಯ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಈ ವೇಳೆ ಮುಂಬೈನ ಇಮಿಗ್ರೇಷನ್ ಅಧಿಕಾರಿಗಳು ಈತನ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಯಾಗಿರುವ ಬಗ್ಗೆ ಖಚಿತಪಡಿಸಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ತೌಸೀಫ್ ಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.